X Close
X

ಶೀಘ್ರದಲ್ಲೇ ಶುಭ ಸುದ್ದಿ: ಕೇಂದ್ರ ನಾಯಕರ ಜೊತೆಗಿನ ಸಭೆ ತೃಪ್ತಿ, ಸಮಾಧಾನ ತಂದಿದೆ-ದೆಹಲಿಯಲ್ಲಿ ಬಿಎಸ್ ವೈ!


CM_BYS_with_Central_leaders2

ನವದೆಹಲಿ: ಮಂತ್ರಿ ಮಂಡಲ ವಿಸ್ತರಣೆ ಕುರಿತಂತೆ ಕೇಂದ್ರದ ವರಿಷ್ಠರ ಜೊತೆಗೆ ಇಂದು ನಡೆದ ಸಭೆಯಲ್ಲಿ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ. ಕೇಂದ್ರ ನಾಯಕರ ಜೊತೆಗಿನ ಸಭೆ, ತಮಗೆ ತೃಪ್ತಿ , ಸಮಾಧಾನ ತಂದಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ, ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ವಿಸ್ತೃತವಾದ ಚರ್ಚೆ ನಡೆದಿದೆ. ಕೇಂದ್ರ ನಾಯಕರಿಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿದ್ದೇವೆ. ಆದಷ್ಟು ಶೀಘ್ರದಲ್ಲಿಯೇ ಶುಭ ಸುದ್ದಿ ಸಿಗುವ ವಿಶ್ವಾಸವಿದೆ ಎಂದರು.

ಆದಾಗ್ಯೂ, ಮಂತ್ರಿ ಮಂಡಲ ವಿಸ್ತರಣೆಯೇ ಅಥವಾ ಪುನಾರಚನೆಯೋ ಎಂಬುದರ ಬಗ್ಗೆ ಗೊಂದಲಕಾರಿ ಹೇಳಿಕೆಗಳನ್ನು ನೀಡಿದ ಮುಖ್ಯಮಂತ್ರಿ, ಈ ವಿಚಾರದಲ್ಲಿ ಕೇಂದ್ರ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದಷ್ಟೇ ಪ್ರತಿಕ್ರಿಯಿಸಿದರು. 

 

ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ವರಿಷ್ಠರಿಗೆ ಸಂತೋಷವನ್ನುಂಟುಮಾಡಿದ್ದು, ಮುಂಬರುವ ಲೋಕಸಭಾ, ವಿಧಾನಸಭಾ ಉಪ ಚುನಾವಣೆಯಲ್ಲಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸುವಂತೆ ಸಲಹೆ ನೀಡಿದ್ದಾರೆ. ಆಕಾಂಕ್ಷಿಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ಕೇಂದ್ರಕ್ಕೆ ರವಾನಿಸಲಾಗುವುದು ಎಂದರು.

ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆಯೂ ಚರ್ಚೆ ನಡೆದಿದ್ದು, ರಾಜ್ಯದಲ್ಲಿ ಪಕ್ಷ ಸಂಘಟನೆ ಕುರಿತಂತೆ ಸಲಹೆ, ಸೂಚನೆಗಳನ್ನು ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

(KANNADA PRABHA)