X Close
X

ರಾಜ್ಯಸಭಾ ಚುನಾವಣೆ: ಮತ್ತೆ ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ಕಣಕ್ಕೆ?


Nirmala-Sitharaman

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮತ್ತೆ ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಬೆಂಗಳೂರಿನಲ್ಲಿ ಇಂದು ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ, ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಅನುಮೋದನೆಗಾಗಿ ಪಟ್ಟಿಯನ್ನು ಪಕ್ಷದ ಕೇಂದ್ರ ನಾಯಕರಿಗೆ ಕಳುಹಿಸುವ ನಿರೀಕ್ಷೆಯಿದೆ. 

ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ 120 ಶಾಸಕರನ್ನು ಹೊಂದಿರುವ ರಾಜ್ಯ ಬಿಜೆಪಿ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬಹುದಾಗಿದ್ದು. ಇಬ್ಬರಲ್ಲಿ ಈಗಾಗಲೇ ಒಬ್ಬರಾಗಿ ನಿರ್ಮಲಾ ಸೀತಾರಾಮನ್ ಅವರ ಹೆಸರು ಆಯ್ಕೆ ಮಾಡಲಾಗಿದ್ದು, ಮತ್ತೊಬ್ಬ ನಾಯಕನ ಹೆಸರು ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ. 

ಕರ್ನಾಟಕದಿಂದ ರಾಜ್ಯಸಭೆ ಆಯ್ಕೆಯಾಗಿದ್ದ ಕೆಸಿ ರಾಮಮೂರ್ತಿ, ಜೈರಾಂ ರಮೇಶ್, ಆಸ್ಕರ್ ಫರ್ನಾಂಡಿಸ್, ನಿರ್ಮಲಾ ಸೀತಾರಾಮನ್ ಅವರ ಅವಧಿ ಇದೇ ಜೂನ್ 30ರಂದು ಮುಗಿಯಲಿದೆ. ಈ ಸ್ಥಾನಗಳಿಗೆ ದಿನಾಂಕ ಜೂನ್.10ರಂದು ಚುನಾವಣೆ ನಿಗದಿಗೊಳಿಸಲಾಗಿದೆ. 

ಕರ್ನಾಟಕ ನಾಲ್ಕು ಸ್ಥಾನಗಳು ಸೇರಿದಂತೆ ದೇಶದ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಮೇ 24ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದೆ. ಮೇ 31ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜೂ. 01ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.  ಜೂನ್ 03ರಂದು ನಾಮಪತ್ರಗಳನ್ನು ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ. ಜೂನ್ 10 ರಂದು ಮತದಾನ ಬೆಳಿಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಗೆ ಮತಏಣಿಕೆ ನಡೆಯಲಿದೆ.

ಕೇಂದ್ರ ಸಚಿವರಾಗಿರುವ ಸದಸ್ಯರನ್ನು ಆಯ್ಕೆ ಮಾಡುವುದು ಕರ್ನಾಟಕಕ್ಕೆ ಪ್ರತಿಷ್ಠೆಯ ವಿಷಯವಾಗಿರುವುದರಿಂದ ಅವರನ್ನು ಎರಡನೇ ಅವಧಿಗೆ ಮೇಲ್ಮನೆಗೆ ಕಳುಹಿಸಲು ಉತ್ಸುಕರಾಗಿದ್ದೇವೆಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಕೇಂದ್ರ ನಾಯಕರು ಸೀತಾರಾಮನ್‌ಗೆ ಒಪ್ಪಿಗೆ ನೀಡುತ್ತಾರೆಂಬ ವಿಶ್ವಾಸ ನಮಗಿದೆ. ಎರಡನೇ ಅಭ್ಯರ್ಥಿಗೆ ಬಗ್ಗೆ ಸ್ಪಷ್ಟ ಮಾಹಿತಿಗಳು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡಿ, ಶನಿವಾರ ನಡೆಯಲಿರುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸ್ಥಾನಗಳ ಸಂಖ್ಯೆಯನ್ನು ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈಗಾಗಲೇ ಈ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಕೋರ್ ಕಮಿಟಿಯಲ್ಲಿ ವಿವರವಾಗಿ ಚರ್ಚಿಸಲಾಗುವುದು ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ಪರಿಷತ್ತಿಗೆ ಈಗಾಗಲೇ ಅರುಣ್ ಶಹಾಪುರ (ವಾಯುವ್ಯ ಶಿಕ್ಷಕರು), ಹನುಮಂತ ರುದ್ರಪ್ಪ ನಿರಾಣಿ (ವಾಯುವ್ಯ ಪದವೀಧರರು) ಮತ್ತು ಎಂವಿ ರವಿಶಂಕರ್ (ದಕ್ಷಿಣ ಪದವೀಧರರು) ಮೂರು ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಬಸವರಾಜ ಹೊರಟ್ಟಿ ಅವರಿಗೆ ಸಿಗುವ ಸಾಧ್ಯತೆ ಇದೆ ಎಂದಿದ್ದಾರೆ. 

ಈ ನಡುವೆ ಜೆಡಿಎಸ್, ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಕಾರ್ಯ ನಿರತವಾಗಿದ್ದು, ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಯ ಬಗ್ಗೆ ಇನ್ನೂ ಚರ್ಚೆ ನಡೆಸಿಲ್ಲ ಎಂದು ತಿಳಿದುಬಂದಿದೆ. 

ನಮಗೆ ಸಮಯವಿಲ್ಲ, ಇನ್ನೆರಡು ದಿನಗಳಲ್ಲಿ ಸಭೆ ನಡೆಸಲಿದ್ದೇವೆ ಎಂದು ಮುಖಂಡ ಬಂಡೆಪ್ಪ ಕಾಶಂಪೂರ್ ಹೇಳಿದರು. 

32 ಶಾಸಕರನ್ನು ಹೊಂದಿರುವ ಜೆಡಿಎಸ್‌ಗೆ 45 ಮತಗಳು ಬೇಕಾಗಿರುವುದರಿಂದ ಒಬ್ಬ ರಾಜ್ಯಸಭಾ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಂಕಷ್ಟವನ್ನು ಎದುರಿಸುತ್ತಿದೆ. 

ಪಕ್ಷದಿಂದಲೇ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಅಥವಾ ಇತರ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸಬೇಕೇ ಎಂಬುದರ ಕುರಿತು ಪಕ್ಷದ ನಾಯಕರು ನಿರ್ಧರಿಸುತ್ತಾರೆ ಎಂದು ಕಾಶಂಪುರ ತಿಳಿಸಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕರು ರಾಜಸ್ಥಾನದಲ್ಲಿ ನಡೆಯುತ್ತಿರುವ ಚಿಂತನ್ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ವೇಳೆ ಪಕ್ಷದ ನಾಯಕರು ಚುನಾವಣೆಗಳ ಕುರಿತು ನಿರ್ದೇಶನ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

(KANNADA PRABHA)