X Close
X

ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್‌, ಬಿಜೆಪಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ!


congress-padayatra

ಬೆಂಗಳೂರು: ಕಾಂಗ್ರೆಸ್ ತನ್ನ 11 ದಿನಗಳ ಮೇಕೆದಾಟು ಪಾದಯಾತ್ರೆಯನ್ನು ಪೂರ್ಣಗೊಳಿಸುವುದಾಗಿ ಪುನರುಚ್ಛರಿಸಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ತಮ್ಮ ಪಕ್ಷದ ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿರುವ ರಾಜ್ಯ ಸರ್ಕಾರ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ರ್ಯಾಲಿ ನಡೆಸಿದ ಬಿಜೆಪಿ ನಾಯಕರ ವಿರುದ್ಧವೇಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ಬೇಕಿದ್ದರೆ ಮತ್ತಷ್ಟು ಪ್ರಕರಣಗಳನ್ನು ದಾಖಲಿಸಲಿ. ಪ್ರಕರಣ ದಾಖಲಿಸಿ ನಮ್ಮನ್ನು ಹೆದರಿಸಬಹುದು ಎಂದು ಅವರು ಭಾವಿಸಿದರೆ ಇದು ಅವರ ಬುದ್ಧಿಹೀನ ನಡವಳಿಕೆಯಷ್ಟೇ. ಈ ಪ್ರಕರಣಗಳ ವಿರುದ್ಧವೂ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ. 

ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದಕ್ಕಾಗಿ ಸುಮಾರು 50 ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದ್ದಾರೆ. ಆದರೆ, ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್, ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರರು ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಬೃಹತ್ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟದ ಸಚಿವರು ಕೂಡ ಇತ್ತೀಚೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೂತನವಾಗಿ ಚುನಾಯಿತ ಎಂಎಲ್‌ಸಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು, ಅಲ್ಲಿ 3,000-4,000 ಜನರು ಸೇರಿದ್ದರು. ಈ ಸಂಬಂಧ ಯಾವುದೇ ಪ್ರಕರಣಗಳೂ ದಾಖಲಾಗಲಿಲ್ಲ ಎಂದು ಕಿಡಿಕಾರಿದ್ದಾರೆ. 

ಪಾದಯಾತ್ರೆಯಿಂದ ಕಾಂಗ್ರೆಸ್‌ಗೆ ರಾಜಕೀಯ ಲಾಭ ಸಿಗಲಿದೆ ಎಂಬ ಭಯ ಬಿಜೆಪಿಗಿದೆ. ಹೀಗಾಗಿ ಹೋರಾಟ ಮಣಿಸಲು ಹತಾಶ ಪ್ರಯತ್ನ ನಡೆಸುತ್ತಿದೆ. ಮೇಕೆದಾಟು ಯೋಜನೆ ಜಾರಿ ವಿಳಂಬ ಮಾಡಲು ನೆರೆಯ ತಮಿಳುನಾಡಿನೊಂದಿಗೆ ಬಿಜೆಪಿ ಸರ್ಕಾರ ಶಾಮೀಲಾಗಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ. ತಮಿಳುನಾಡು ರಾಜ್ಯದಲ್ಲಿ ತನ್ನ ನೆಲೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಆಡಳಿತರೂಡ ಬಿಜೆಪಿ ಪಕ್ಷವು ತಮಿಳುನಾಡಿನತ್ತ ಒಲವು ತೋರುತ್ತಿದೆ ಎಂದು ಆರೋಪಿಸಿದ್ದಾರೆ. 

ನೀವು ತಮಿಳುನಾಡಿನೊಂದಿಗೆ ಶಾಮೀಲಾಗಿ ಕರ್ನಾಟಕ ಮತ್ತು ಅದರ ಜನರಿಗೆ ದ್ರೋಹ ಮಾಡುತ್ತೀರಾ? ನಾವು ಅದಕ್ಕೆ ಅವಕಾಶ ನೀಡುವುದಿಲ್ಲ, ನಿಮ್ಮ ಷಡ್ಯಂತ್ರವನ್ನು ಬಹಿರಂಗಗೊಳಿಸುತ್ತೇವೆ, ಪಾದಯಾತ್ರೆಯು ಜನರ ಹಿತಾಸಕ್ತಿಯಿಂದ ಕೂಡಿದೆ ಮತ್ತು ಇದರಲ್ಲಿ ಯಾವುದೇ ಪ್ರತಿಷ್ಠೆಯ ವಿಚಾರಗಳಿಲ್ಲ. ಪಾದಯಾತ್ರೆ ತಡೆಗೆ ಷಡ್ಯಂತ್ರ ನಡೆದಿದೆ ಎರಡು ದಿನ ಕಾಲ ನಡೆದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಏನೂ ಆಗಿಲ್ಲ. ಆದರೆ, ಕೋವಿಡ್-ಪಾಸಿಟಿವ್ ವರದಿ ನೀಡಿ ಮೆರವಣಿಗೆ ನಿಲ್ಲಿಸಲು ಸರ್ಕಾರ ಯೋಜಿಸಿದಂತೆ ತೋರುತ್ತಿದೆ. ನಾವು ನಮ್ಮ ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ ಮತ್ತು ಅದನ್ನು ಯೋಜಿಸಿದಂತೆ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ 2013ರಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು, ಪಾದಯಾತ್ರೆಗೆ ಜನರು ಸ್ವಯಂಪ್ರೇರಿತರಾಗಿ ಸೇರ್ಪಡೆಯಾಗುತ್ತಿದ್ದಾರೆಂಬ ಭಯ ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿಯವರಿಗೆ ಶುರುವಾಗಿದೆ. ಬಳ್ಳಾರಿಯಲ್ಲಿ ನಡೆದ ಪಾದಯಾತ್ರೆಯಂತೆಯೇ ಈ ಪಾದಯಾತ್ರೆ ಕೂಡ ಆಗಲಿದೆ ಎಂಬ ಭಯ ಅವರಿಗಿದೆ. ಇದು ಅವರ ನಿದ್ರೆಯನ್ನು ಕೆಡಿಸಿದೆ ಎಂದಿದ್ದಾರೆ. 

ಬಳಿಕ ಸಾಂಕ್ರಾಮಿಕ ರೋಗದ ಮಧ್ಯೆ ಪಾದಯಾತ್ರೆ ನಡೆಸುತ್ತಿರುವುದನ್ನು ಸಮರ್ಥಿಸಿಕೊಂಡ ಅವರು, “ಮಹಾರಾಷ್ಟ್ರ ಮತ್ತು ದೆಹಲಿಯಲ್ಲೂ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲಿ ನಮ್ಮ ಪಾದಯಾತ್ರೆ ನಡೆಯುತ್ತಿದೆಯೇ? ಪಾದಯಾತ್ರೆಯಿಂದ ಪ್ರಕರಣಗಳು ಹರಡುತ್ತಿಲ್ಲ, ಮೂರನೇ ಅಲೆ ಸಹಜವಾಗಿ ಹೆಚ್ಚಾಗುತ್ತಿದೆ ಎಂದು ಹೇಳಿದರು. 

ಕಾಂಗ್ರೆಸ್ ಸರ್ಕಾರ ಆರಂಭಿಸಿದ ಮೇಕೆದಾಟು ಯೋಜನೆಯನ್ನು ಬಿಜೆಪಿ ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಸಿದ್ದರಾಮಯ್ಯ, ಅಧಿಕಾರದಲ್ಲಿದ್ದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಆದರೆ ಈಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೂ ಪರಿಸರ ಅನುಮತಿ ಪಡೆದು ಯೋಜನೆ ಆರಂಭಿಸಲು ಏಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

(KANNADA PRABHA)