X Close
X

ಮಿಥಾಲಿ ರಾಜ್ ಜೀವನಚರಿತ್ರೆ 'ಶಭಾಶ್ ಮಿಥು' ಟ್ರೈಲರ್: 'ಜಂಟಲ್‌ಮನ್ ಆಟ'ವನ್ನು ಮರು ವ್ಯಾಖ್ಯಾನಿಸಿದ ತಾಪ್ಸಿ ಪನ್ನು!


Shabaash-Mithu-trailer01

ಮುಂಬೈ: ತಾಪ್ಸಿ ಪನ್ನು ಅಭಿನಯದ ಸ್ಪೋರ್ಟ್ಸ್ ಡ್ರಾಮಾ 'ಶಭಾಷ್ ಮಿಥು' ಟ್ರೇಲರ್ ಇಂದು ಬಿಡುಗಡೆಗೊಂಡಿದ್ದು, ಮಿಥಾಲಿ ರಾಜ್ ಪಾತ್ರದಲ್ಲಿ ನಟಿ ತಾಪ್ಸಿ ಮಿಂಚಿದ್ದಾರೆ.

'ಶಭಾಶ್ ಮಿಥು' ಚಿತ್ರವು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ, ಮಹಿಳಾ ಕ್ರಿಕೆಟ್ ನ ಲೆಜೆಂಡ್ ಆಟಗಾರ್ತಿ ಮಿಥಾಲಿ ರಾಜ್ ಅವರ ಜೀವನಾಧಾರಿತ ಚಿತ್ರವಾಗಿದೆ. ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 23 ವರ್ಷಗಳ ಸುದೀರ್ಘ ವೃತ್ತಿಜೀವನದ ದಾಖಲೆ ಮೂಲಕ ಹೆಸರುವಾಸಿಯಾಗಿದ್ದಾರೆ. ಈ ಚಿತ್ರವನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದು, ಪ್ರಿಯಾ ಅವೆನ್ ಚಿತ್ರಕಥೆ ಬರೆದಿದ್ದಾರೆ. ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ದೇಶೀಯ ಮತ್ತು ಅಂತರಾಷ್ಟ್ರೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರದಲ್ಲಿ ತಾಪ್ಸಿ ಕ್ರಿಕೆಟರ್ ಆಗುವ ಕನಸು ಕಾಣುವ ಮಿಥು ಎಂಬ ಹುಡುಗಿಯಾಗಿ ನಟಿಸಿದ್ದಾರೆ. ಆದರೂ ಆ ಕನಸಿನೆಡೆಗಿನ ಪಯಣ ಅವಳಿಗೆ ಸುಲಭವಾಗಿರುವುದಿಲ್ಲ. ಆಕೆಯ ತರಬೇತುದಾರರಿಂದ (ವಿಜಯ್ ರಾಝ್ ನಿರ್ವಹಿಸಿದ ಪಾತ್ರ) ಬೆಂಬಲದೊಂದಿಗೆ, ಅವರು ಮಹಿಳಾ ಕ್ರಿಕೆಟರ್ ಆಗಿ ತಮ್ಮ ದಾರಿಯನ್ನು ಕಂಡುಕೊಳ್ಳುತ್ತಾರೆ. ಬೆದರಿಕೆ ಮತ್ತು ಅಪಹಾಸ್ಯಗಳ ಹೊರತಾಗಿಯೂ ಆಕೆ ಎಲ್ಲಾ ಅಡೆತಡೆಗಳನ್ನು ಎದುರಿಸಲು ಕಲಿಯುತ್ತಾಳೆ ಮತ್ತು ತನಗಾಗಿ ಮತ್ತು ತನ್ನ ಮಹಿಳಾ ತಂಡಕ್ಕಾಗಿ ನಿಲ್ಲುತ್ತಾಳೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ ತಂಡದ ನೈಜ ಹೋರಾಟವನ್ನು ಚಿತ್ರಣವು ಈ ಚಿತ್ರದಲ್ಲಿದೆ.

ಭಾರತದ ಅಪ್ರತಿಮ ಕ್ರಿಕೆಟಿಗರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಅವರು ಈ ಚಿತ್ರ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದು, ತಾಪ್ಸಿ ಪನ್ನು ಮತ್ತು ಮಿಥಾಲಿ ರಾಜ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ. ತಾಪ್ಸಿಯ ಮುಂಬರುವ ಬಿಡುಗಡೆಯಾಗುವ ಚಿತ್ರಗಳಲ್ಲಿ 'ದೋಬಾರಾ', 'ವೋ ಲಡ್ಕಿ ಹೈ ಕಹಾ?', 'ಬ್ಲರ್' ಮತ್ತು 'ಡುಂಕಿ' ಚಿತ್ರಗಳು ಸೇರಿವೆ.
 

(KANNADA PRABHA)