X Close
X

ಬಿಎಸ್ ವೈ ಮಗ ಎಂದಲ್ಲ, ನಾನು ಮಾಡಿರುವ ಉತ್ತಮ ಕೆಲಸಗಳನ್ನು ನೋಡಿ ಪಕ್ಷದಲ್ಲಿ ಸ್ಥಾನ ನೀಡಿದ್ದಾರೆ:ಬಿ ವೈ ವಿಜಯೇಂದ್ರ


vijayendra

ಬೆಂಗಳೂರು: 2018ರಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಿಂದ ಕೊನೆ ಕ್ಷಣದಲ್ಲಿ ಹೊರಬಿದ್ದು, 2019ರಲ್ಲಿ ವರುಣಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲು ಕಾರಣಕರ್ತರಾಗಿ ಇದೀಗ ಬಿಜೆಪಿ ರಾಜ್ಯ ಉಪಾಧ್ಯಕ್ಷ ಪಟ್ಟ ಸಿಗುವವರೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ತಮ್ಮದೇ ರೀತಿಯಲ್ಲಿ ರಾಜಕೀಯ ಹೋರಾಟ ನಡೆಸಿದ್ದಾರೆ. 

ನ್ಯೂ ಸಂಡೆ ಎಕ್ಸ್ ಪ್ರೆಸ್ ಪ್ರತಿನಿಧಿಗಳು ನಡೆಸಿದ ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು ವಿಜಯೇಂದ್ರ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ: 

ನೀವು ಈ ಹೊಸ ಜವಾಬ್ದಾರಿಯನ್ನು ನಿರೀಕ್ಷಿಸಿದ್ದರೆ?
-ಇಲ್ಲ, ನಮ್ಮ ಪಕ್ಷದ ನಾಯಕರು ನನ್ನ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿ ಕೊಟ್ಟದಕ್ಕೆ ಧನ್ಯವಾದಗಳು. ಪರಂಪರೆ, ವಂಶ ರಾಜಕಾರಣದಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ, ಆದರೆ ನನ್ನ ಮೇಲೆ ನಂಬಿಕೆಯಿರುವುದರಿಂದ ಈ ಹುದ್ದೆ ಕೊಟ್ಟಿದ್ದಾರೆ. ನನಗೆ ಕೆಲಸ ಮಾಡಲು ಸಿಕ್ಕಿರುವ ಉತ್ತಮ ಅವಕಾಶ ಎಂದು ಭಾವಿಸುತ್ತೇನೆ.

ನಿಮ್ಮ ಗುರಿ ಏನು?
-ಸಂಘಟನೆ ವಿಷಯ ಬಂದಾಗ ಹಳೆ ಮೈಸೂರು ಭಾಗ, ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಕಳೆದ ಚುನಾವಣೆಯಲ್ಲಿ ನಮಗೆ 104 ಸೀಟು ಬಂತು. ಮುಂದಿನ ಚುನಾವಣೆಯಲ್ಲಿ 150ಕ್ಕೂ ಅಧಿಕ ಸೀಟು ಗೆಲ್ಲಬೇಕೆಂಬ ಕನಸು ಯಡಿಯೂರಪ್ಪನವರದ್ದು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಜನರಲ್ಲಿ ಸಾಕಷ್ಟು ನಿರೀಕ್ಷೆಯಿರುತ್ತದೆ. ಈ ಕೋವಿಡ್-19 ಬಿಕ್ಕಟ್ಟು ಸಮಯದಲ್ಲಿ, ಆರ್ಥಿಕ ದುಸ್ಥಿತಿ ಸಂದರ್ಭದಲ್ಲಿ ನಿಭಾಯಿಸುವುದು ಸವಾಲಿನ ಕೆಲಸ. ರಾಜ್ಯಾದ್ಯಂತ ಓಡಾಡಿ ಜನರ ಸಂಕಷ್ಟಗಳ ಬಗ್ಗೆ ಆಲಿಸಬೇಕು. ಯುವಜನತೆ ಬಗ್ಗೆ ಚಿಂತಿಸಬೇಕು. ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ ಮೇಲೆ ರಾಜ್ಯದಲ್ಲಿ ಗಮನ ಹರಿಸಬೇಕು.

2018ರಲ್ಲಿ ವರುಣಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಬೇಕಿತ್ತು, ಏನಾಯಿತು?
-ಚುನಾವಣಾ ರಾಜಕೀಯದಲ್ಲಿ ನನಗೆ ಇಷ್ಟವಿಲ್ಲದಿದ್ದರೂ ನಮ್ಮ ಕಾರ್ಯಕರ್ತರು ವರುಣಾ ಕ್ಷೇತ್ರದಲ್ಲಿರುವವರು ನನ್ನಂತವರು ಚುನಾವಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು. ವರುಣಾ ಸಿದ್ದರಾಮಯ್ಯನವರ ತವರು ಕ್ಷೇತ್ರವಾಗಿತ್ತು. ಹೀಗಾಗಿ ನಾನು ಸವಾಲಾಗಿ ತೆಗೆದುಕೊಳ್ಳಲು ನಿಶ್ಚಯಿಸಿದ್ದೆ. ನಮ್ಮ ನಾಯಕರು ನಾನು ಚುನಾವಣೆಗೆ ನಿಲ್ಲಬಾರದು ಎಂದು ನಂತರ ನಿರ್ಧರಿಸಿದರು ಹೀಗಾಗಿ ನಾನು ಕಾರ್ಯಕರ್ತನಾಗಿ ನಾಯಕತ್ವ ತೀರ್ಮಾನವನ್ನು ಒಪ್ಪಿಕೊಂಡೆ.

ಈಗ ಸಿಕ್ಕಿರುವ ಹುದ್ದೆ ಚುನಾವಣಾ ರಾಜಕೀಯಕ್ಕೆ ನಿಮಗೆ ಹತ್ತಿರವಾಗಬಹುದೇ?
ಪಕ್ಷದ ನಿರ್ದೇಶನದಂತೆ ಹೋಗುತ್ತೇನೆ. ಸಂಘಟನೆ ಮೇಲೆ ನನ್ನ ಗುರಿ. ರಾಜ್ಯಾದ್ಯಂತ ಸುತ್ತಾಡಿ ತಳಮಟ್ಟದಿಂದ ಕಾರ್ಯಕರ್ತರನ್ನು ಭೇಟಿ ಮಾಡಿ ಸಮಸ್ಯೆ ಅರಿತುಕೊಂಡು ಒಗ್ಗೂಡುವುದು.

ಸ್ವಜನಪಕ್ಷಪಾತ ವಿರುದ್ಧ ಹೋರಾಡುವ ಪಕ್ಷ ಬಿಜೆಪಿ, ನಿಮ್ಮ ತಂದೆ ಮುಖ್ಯಮಂತ್ರಿ, ನಿಮ್ಮ ಸೋದರ ಸಂಸದ ಏನನ್ನುತ್ತೀರಿ?
-ಬಿ ವೈ ರಾಘವೇಂದ್ರ ಅವರ ಬಗ್ಗೆ ತೆಗೆದುಕೊಂಡರೆ ನೀವು 2009ಕ್ಕೆ ಹೋಗಬೇಕು. ಯಡಿಯೂರಪ್ಪನವರು ಆಗ ತಮ್ಮ ಮಗನಿಗೆ ಟಿಕೆಟ್ ಕೊಡಿ ಎಂದು ಲಾಬಿ ಮಾಡಿರಲಿಲ್ಲ. ಮಾಜಿ ಸಿಎಂ ಬಂಗಾರಪ್ಪನವರನ್ನು ಸೋಲಿಸುವಂತ ಅಭ್ಯರ್ಥಿಗಳು ಬೇಕಾಗಿತ್ತು. ಹಾಗಾಗಿ ನಿಲ್ಲಿಸಿದರು. ನನ್ನ ವಿಷಯ ತೆಗೆದುಕೊಂಡರೆ ಕೇಂದ್ರ ಅಥವಾ ರಾಜ್ಯ ನಾಯಕರು ನಾನು ಯಡಿಯೂರಪ್ಪ ಮಗ ಎಂದು ನೋಡಲಿಲ್ಲ. ಕೆ ಆರ್ ಪೇಟೆ ಉಪ ಚುನಾವಣೆಯಲ್ಲಿ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾನು ಮಾಡಿರುವ ಉತ್ತಮ ಕೆಲಸ ನೋಡಿ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಅನಿಸುತ್ತಿದೆ. 

ಕೆ ಆರ್ ಪೇಟೆಯಲ್ಲಿ ಚುನಾವಣೆಯಲ್ಲಿ ಗೆಲ್ಲಲು ಏನು ಕಾರಣವಾಗಿರಬಹುದು?
-ಜನರು ಜಾತಿ ಬಿಟ್ಟು ಬೇರೆ ಯೋಚಿಸುತ್ತಾರೆ ಎಂದು ಕಲಿತೆ. ನಾಯಕರ ಮನಸ್ಸಿನಲ್ಲಿರುವ ಪರಿಕಲ್ಪನೆಯಷ್ಟೆ ಈ ಜಾತಿ ಅನ್ನೋದು. ಜನ ನೋಡುವುದು ಅಭಿವೃದ್ಧಿ ಕೆಲಸ. 2009ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕೆ ಆರ್ ಪೇಟೆಯಲ್ಲಿ ಮಾಡಿದ್ದ ಅಭಿವೃದ್ಧಿಪರ ಕೆಲಸಗಳೇ ಉಪ ಚುನಾವಣೆಯಲ್ಲಿ ನಮಗೆ ಗೆಲುವಿಗೆ ಕಾರಣವಾಗಿರಬಹುದು. 

ಯಡಿಯೂರಪ್ಪನವರ ಆಡಳಿತದಲ್ಲಿ ಮಧ್ಯೆ ಪ್ರವೇಶಿಸುತ್ತೀರಿ ಎಂಬ ಆರೋಪ ನಿಮ್ಮ ಮೇಲಿದೆ, ಇದಕ್ಕೆ ಏನನ್ನುತ್ತೀರಿ?
-ನನ್ನ ಅಥವಾ ಸಿಎಂ ಕುಟುಂಬದವರ ಯಾರ ಮೇಲೂ ಆರೋಪ ಮಾಡುವುದು ಸುಲಭ. ಪಕ್ಷದ ಕಾರ್ಯಕರ್ತರು ಮತ್ತು ಸಿಎಂ ಮಧ್ಯೆ ಸೇತುವೆಯಾಗಿ ಮಾತ್ರ ನಾನು ಕೆಲಸ ಮಾಡುತ್ತೇನೆ. ಸಿಎಂ ಅವರ ಅಧಿಕೃತ ಕೆಲಸಗಳು, ಸಂಸದರು, ಸಚಿವರುಗಳ ಕೆಲಸಗಳಲ್ಲಿ ನಾನು ಮಧ್ಯೆ ಪ್ರವೇಶಿಸಿಲ್ಲ. ಅವರ್ಯಾರು ನನ್ನ ಮೇಲೆ ಆಪಾದನೆ ಮಾಡಿಲ್ಲ. ಮಾಧ್ಯಮಗಳಲ್ಲಿ ಸುಮ್ಮನೆ ನನ್ನ ಮೇಲೆ ಆಪಾದನೆಗಳ ವದಂತಿ ಬರುತ್ತಿವೆಯಷ್ಟೆ, ಅದಕ್ಕೆ ನಾನು ಪ್ರಾಮುಖ್ಯತೆ ನೀಡುವುದಿಲ್ಲ.

ಒಂದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ಪೂರೈಸಿರುವ ಮುಖ್ಯಮಂತ್ರಿಯವರಲ್ಲಿ, ಸರ್ಕಾರ ಮತ್ತು ಪಕ್ಷದಲ್ಲಿ ಅನಿಶ್ಚಿತತೆ ಕಾಣಿಸುತ್ತಿದೆಯಲ್ಲವೇ?
-ಕೆಲವು ವಿಷಯಗಳಿರಬಹುದು. ಕಳೆದ ಆರೇಳು ವರ್ಷ ನಾವು ಪ್ರತಿಪಕ್ಷದಲ್ಲಿದ್ದೆವು. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಉತ್ಸುಕರಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಹಿಂದಿನ ಸರ್ಕಾರದಿಂದ ಸರಿಯಾದ ಉತ್ತೇಜನ, ಸಹಕಾರ, ಹಣ ಸಿಗುತ್ತಿರಲಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಇತಿಮಿತಿಯಿದೆ. ಹಣಕಾಸು ಸಚಿವರೂ ಕೂಡ ಆಗಿ ಸಿಎಂ ಹಣಕಾಸಿನ ಶಿಸ್ತು ಕಾಪಾಡಬೇಕು. ಇನ್ನು ಸರ್ಕಾರದಲ್ಲಿ, ಪಕ್ಷದಲ್ಲಿ ಅನಿಶ್ಚಿತತೆ ಇಲ್ಲ. 

(KANNADA PRABHA)