X Close
X

ಪ್ರಧಾನಿ ಮೋದಿ ಪ್ರಯಾಣಕ್ಕೆ ಪಾಕ್ ವಾಯುಮಾರ್ಗ ಬಳಕೆಗೆ ಅನುಮತಿ ಕೋರಿದ ಭಾರತ, ಪಾಕ್ ನಿಂದ ತಾತ್ವಿಕ ಒಪ್ಪಿಗೆ


pakistan-india
ಲಾಹೋರ್: ಇದೇ ತಿಂಗಳ 13 ಮತ್ತು 14ರಂದು ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್ ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರ ವಿಮಾನಕ್ಕೆ ಪಾಕಿಸ್ತಾನದ ವಾಯುಮಾರ್ಗದಲ್ಲಿ ಸಂಚರಿಸಲು ಭಾರತ ಮಾಡಿದ್ದ ಮನವಿಗೆ ಪಾಕಿಸ್ತಾನ ತಾತ್ವಿಕ ಒಪ್ಪಿಗೆ ನೀಡಿದೆ.

ಕಳೆದ ಫೆಬ್ರವರಿ 26ರಂದು ಪಾಕಿಸ್ತಾನದ ಪ್ರಾಂತ್ಯದೊಳಗಿರುವ ಬಾಲಾಕೋಟ್ ನಲ್ಲಿ ಜೈಶ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಶಿಬಿರ ತಾಣವನ್ನು ನಾಶಪಡಿಸಲು ಭಾರತೀಯ ವಾಯುಪಡೆ ವಿಮಾನ ಏಕಾಏಕಿ ವಾಯುದಾಳಿ ನಡೆಸಿತ್ತು. ಈ ಘಟನೆ ನಂತರ ಪಾಕಿಸ್ತಾನ ತನ್ನ ಒಟ್ಟು 11 ವಾಯುಮಾರ್ಗಗಳಲ್ಲಿ ದಕ್ಷಿಣ ಪಾಕಿಸ್ತಾನದ ಎರಡು ವಾಯುಮಾರ್ಗಗಳಲ್ಲಿ ಸಂಚಾರಕ್ಕೆ ಮಾತ್ರ ಭಾರತಕ್ಕೆ ಅನುಮತಿ ನೀಡಿತ್ತು. ಬೇರೆಲ್ಲಾ ಮಾರ್ಗಗಳು ಭಾರತದ ಪಾಲಿಗೆ ಮುಚ್ಚಿದ್ದವು.

ಇದೀಗ ಪ್ರಧಾನಿ ಮೋದಿಯವರಿಗೆ ಕಿರ್ಗಿಸ್ತಾನಕ್ಕೆ ಹೋಗಲು ಪಾಕಿಸ್ತಾನದ ವಾಯುಮಾರ್ಗದ ಮೂಲಕ ಹಾರಾಟ ನಡೆಸಲು ಭಾರತ ಮನವಿ ಮಾಡಿತ್ತು. ಅದಕ್ಕೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.

ಒಪ್ಪಿಗೆ ಪ್ರಕ್ರಿಯೆಗಳು ಮುಗಿದ ನಂತರ ಪಾಕಿಸ್ತಾನ ತನ್ನ ನಿರ್ಧಾರವನ್ನು ಭಾರತಕ್ಕೆ ತಿಳಿಸಲಿದೆ. ನಾಗರಿಕ ವಿಮಾನಯಾನಕ್ಕೆ ನೇರವಾಗಿ ಸೂಚನೆ ನೀಡಲಾಗುವುದು ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೂಲಕ ಶಾಂತಿ ಮಾತುಕತೆಗೆ ಭಾರತ ಮುಂದಾಗಬಹುದು ಎಂಬ ಆಶಾವಾದದಲ್ಲಿ ಪಾಕಿಸ್ತಾನವಿದೆ.

ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾಗವಹಿಸಲಿದ್ದಾರೆ. ಇತ್ತೀಚೆಗೆ ಪಾಕ್ ಪ್ರಧಾನಿ ಭಾರತ ಪ್ರಧಾನಿಗೆ ಪತ್ರ ಬರೆದು ಭೌಗೋಳಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಹಾಗೂ ಎರಡೂ ದೇಶಗಳ ನಡುವಿನ ಜಮ್ಮು-ಕಾಶ್ಮೀರ ವಿವಾದಗಳನ್ನು ಬಗೆಹರಿಸಲು ಪರಿಹಾರದ ಅಗತ್ಯವಿದೆ ಎಂದು ಹೇಳಿದ್ದರು.

ಶಾಂತಿ ಮಾತುಕತೆಯ ತನ್ನ ಪ್ರಸ್ತಾಪಕ್ಕೆ ಭಾರತ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಬಹುದು ಎಂಬ ಆಶಾ ಭಾವನೆಯಲ್ಲಿ ಪಾಕಿಸ್ತಾನ ಇನ್ನೂ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಶಾಂಘೈ ಶೃಂಗಸಭೆಯ ವೇಳೆ ಭಾರತ ಮತ್ತು ಪಾಕಿಸ್ತಾನ ಪ್ರಧಾನ ಮಂತ್ರಿಗಳ ನಡುವೆ ಯಾವುದೇ ಮಾತುಕತೆಗಳು ನಿಗದಿಯಾಗಿಲ್ಲ.

ಕಳೆದ ಮೇ 21ರಂದು ಎಸ್ ಸಿಒ ವಿದೇಶಾಂಗ ಸಚಿವರುಗಳ ಸಭೆ ಬಿಶ್ಕೆಕ್ ನಲ್ಲಿದ್ದಾಗಲೂ ಕೂಡ ಸುಷ್ಮಾ ಸ್ವರಾಜ್ ಅವರ ಪ್ರಯಾಣಕ್ಕೆ ಪಾಕಿಸ್ತಾನ ವಿಶೇಷ ಒಪ್ಪಿಗೆ ನೀಡಿತ್ತು. (KANNADA PRABHA) ()