X Close
X

ಪರೀಕ್ಷೆ ಆರಂಭವಾದ ನಂತರ ವಾಟ್ಸಾಪ್ ನಲ್ಲಿ ಹರಿದಾಡಿದ 10ನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ; ಮರು ಪರೀಕ್ಷೆಯಿಲ್ಲ ಎಂದ ಇಲಾಖೆ


sslc-exam
ವಿಜಯಪುರ: ಈ ಬಾರಿಯ ಎಸ್ಎಸ್ಎಲ್ ಸಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಹೇಳಿ ಫೋಟೋವೊಂದು ವಾಟ್ಸಾಪ್ ಸಂದೇಶದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ವಾಟ್ಸಾಪ್ ಸಂದೇಶ ನೋಡಿ ಇದು ಮೂಲ ಪ್ರಶ್ನೆಪತ್ರಿಕೆಯಾಗಿದೆ ಎಂದು ಖಚಿತಪಡಿಸಿದ್ದಾರೆ.

ನಿನ್ನೆ ಹತ್ತನೇ ತರಗತಿಯ ಗಣಿತ ಪರೀಕ್ಷೆಯಿದ್ದು ಪರೀಕ್ಷೆ ಆರಂಭವಾದ ನಂತರ ಪ್ರಶ್ನೆಪತ್ರಿಕೆ ವಾಟ್ಸಾಪ್ ನಲ್ಲಿ ಹರಿದಾಡಿ ವೈರಲ್ ಆಗಿತ್ತು. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೇ ಬೆಳಗ್ಗೆ 11 ಗಂಟೆ ವೇಳೆಗೆ ಯಾವುದೋ ಅನಾಮಧೇಯ ಸಂಖ್ಯೆಯಿಂದ ಈ ಸಂದೇಶ ಬಂದಿದೆ. ವಾಟ್ಸಾಪ್ ನಲ್ಲಿ ಬಂದ ಫೋಟೋವನ್ನು ಮೂಲ ಪ್ರಶ್ನೆಪತ್ರಿಕೆಯ ಜೊತೆ ತಾಳೆ ಮಾಡಿ ನೋಡಿದಾಗ ಅದೇ ಪ್ರಶ್ನೆಗಳಿವೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ಇದರ ಮೂಲ ಹುಡುಕಿದಾಗ ಪ್ರಶ್ನೆ ಪತ್ರಿಕೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮೊರಟಗಿಯಿಂದ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.

ಮಾರ್ಚ್ 21ರಂದು ಆರಂಭವಾದ ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಿನ್ನೆ ಗಣಿತ ಪರೀಕ್ಷೆಯಿತ್ತು. ಪ್ರಶ್ನೆಪತ್ರಿಕೆ ಹೇಗೆ ಸೋರಿಕೆಯಾಯಿತು ಎಂದು ಅಧಿಕಾರಿಗಳು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಿದ್ದು ತನಿಖೆ ನಡೆಯಲಿದೆ.ಮೊರಟಗಿಯ ಕಲ್ಪರುಕ್ಷ ಶೈಕ್ಷಣಿಕ ಸಂಸ್ಥೆಯಲ್ಲಿ ಸೋರಿಕೆಯಾಗಿದೆ ಎಂದು ನೋಡಲ್ ಅಧಿಕಾರಿ ನನಗೆ ತಿಳಿಸಿದ್ದಾರೆ ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ. ವಿಜಯಪುರದ ಕಲ್ಪರುಕ್ಷದ ಸೂಪರಿಂಟೆಂಡೆಂಟ್ ಅವರನ್ನು ವಜಾ ಮಾಡಲಾಗಿದೆ.

ಈ ಮಧ್ಯೆ ನಿನ್ನೆ ಮೈಸೂರಿನಲ್ಲಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆ ನಡೆಯುವ ಕೊಠಡಿಯೊಳಗೆ ಗುಟ್ಟಾಗಿ ಮೊಬೈಲನ್ನು ತೆಗೆದುಕೊಂಡು ಹೋಗಿ ಪ್ರಶ್ನೆಪತ್ರಿಕೆಯ ಫೋಟೋ ತೆಗೆದು ವಾಟ್ಸಾಪ್ ನಲ್ಲಿ ಕಳುಹಿಸಿದ್ದಾನೆ. ಅದೇ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದ ಬೇರೆ ಅಭ್ಯರ್ಥಿಗಳಿಂದ ವಿಷಯ ಗೊತ್ತಾಗಿ ಮೈಸೂರಿನ ಮಾತೃ ಮಂಡಳಿ ಪರೀಕ್ಷಾ ಕೇಂದ್ರದಲ್ಲಿನ ಅಧಿಕಾರಿಗಳು ಪೊಲೀಸರಿಗೆ ತಿಳಿಸಿ ಅವನನ್ನು ಹಸ್ತಾಂತರಿಸಿದ್ದಾರೆ. (KANNADA PRABHA)