X Close
X

ಪರಿಷತ್ ಚುನಾವಣೆ: ಬಿಜೆಪಿಯಲ್ಲಿ ಶುರುವಾಯ್ತು ಒಳಜಗಳ, ಭಿನ್ನಮತ ಶಮನಗೊಳಿಸಲು ಪ್ರಹ್ಲಾದ್ ಜೋಶಿ ಸಭೆ


prahlad-joshi

ಬೆಳಗಾವಿ: ವಿಧಾನಪರಿಷತ್ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕದ ಬಿಜೆಪಿಯಲ್ಲಿ ಒಳಜಗಳ, ಮನಸ್ತಾಪಗಳು ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶನಿವಾರ ಸಭೆಯೊಂದನ್ನು ನಡೆಸುವ ಭಿನ್ನಮತ ಶಮನಗೊಳಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಯತ್ನ ನಡೆಸಿದ್ದಾರೆಂದು ತಿಳಿದುಬಂದಿದೆ. 

ಚುನಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಿಜೆಪಿ ಸಭೆಯೊಂದನ್ನು ಕರೆದಿತ್ತು. ಈ ಸಭೆಗೆ ಹಲವು ನಾಯಕರು ಗೈರು ಹಾಜರಾಗಿದ್ದು, ಇದು ಪಕ್ಷದೊಳಗೆ ಬಿರುಕು ಮೂಡಿರುವುದನ್ನು ಸ್ಪಷ್ಟಪಡಿಸಿದೆ. 

ಇದೀಗ ಪ್ರಹ್ಲಾದ್ ಜೋಶಿಯವರು ಕರೆದಿರುವ ಸಭೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಜಾರಕಿಹೊಳಿ ಸಹೋದರರು ಬರುತ್ತಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. 

ಇತ್ತೀಚೆಗಷ್ಟೇ ಯತ್ನಾಳ್ ಅವರು ಹನುಮಂತ್ ನಿರಾಣಿಯವರ ಸಹೋದರ ಕೈಗಾರಿಕಾ ಸಚಿವ ಮುರುಗೇಶ್ ಅವರನ್ನು ನಿಂದಿಸಿದ್ದರು. ಈ ಬೆಳವಣಿಗೆ ಬಳಿಕ ಸಭೆಗೆ ಯತ್ನಾಳ್ ಅವರು ಗೈರು ಹಾಜರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುರುಗೇಶ್ ನಿರಾಮಿಯವರು, ವೈಯಕ್ತಿಕ ಮಟ್ಟದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ, ರಾಜಕೀಯವಾಗಿ ನಮ್ಮ ನಡುವೆ ಗಂಭೀರವಾದ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದ್ದಾರೆ.

(KANNADA PRABHA)