X Close
X

ಧರ್ಮಸ್ಥಳದಲ್ಲಿ ತೀರಿಲ್ಲ ನೀರಿನ ಬವಣೆ: ಬಾಳೆ ಎಲೆ ಮೊರೆ ಹೋದ ಹೋಟೆಲ್ ಮಾಲೀಕರು!


water-new
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಅಭಾವವಿದ್ದು, ನೇತ್ರಾವತಿಯಲ್ಲೂ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಆದುದರಿಂದ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳು ಸ್ವಲ್ಪ ದಿನಗಳ ಮಟ್ಟಿಗೆ ಪ್ರವಾಸ ಮುಂದೂಡಿ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಮನವಿ ಮಾಡಿದ್ದರು.

ಬೇಸಿಗೆಯ ಬಿಸಿಲಿನ ತೀವ್ರತೆಯಿಂದಾಗಿ ಧರ್ಮಸ್ಥಳ ಕ್ಷೇತ್ರದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಕ್ಷೇತ್ರಕ್ಕೆ ಬರುವವರು ಕೆಲವು ದಿನ ಬಿಟ್ಟು ಬರಲು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ. ಮಂಗಳೂರಿನಿಂದ 75 ಕಿಮೀ ದೂರದಲ್ಲಿರುವ ಧರ್ಮಸ್ಥಳಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ, ಆದರೆ ಇಂತಹ ಪವಿತ್ರ ಸ್ಥಳದಲ್ಲಿ ನೀರಿನ ಅಭಾವ ತಲೆದೋರಿದೆ.

ದೇವರ ಅಭಿಷೇಕಕ್ಕೂ ನೀರಿನ ಕೊರತೆಯಾಗುತ್ತಿರುವುಗನ್ನು ಮನಗಂಡ ವೀರೇಂದ್ರ ಹೆಗ್ಗಡೆಯವರು, ನೀರಿನ ಸಮಸ್ಯೆ ನಿವಾರಣೆಯಾಗುವವರೆಗೂ ಭಕ್ತರು ಪ್ರವಾಸವನ್ನು ಮುಂದೂಡಬೇಕೆಂದು ಮನವಿ ಮಾಡಿದ್ದರು.

ದೇವಾಸ್ಥಾನದ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಎಲ್ಲಾ ರೀತಿಯ ಸೌಕರ್ಯ ಒದಗಿಸುತ್ತದೆ ಎಂದು ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಇನ್ನೂ ನಗರದಲ್ಲಿರುವ ಹೊಟೇಲ್ ಮಾಲೀಕರು ನೀರಿನ ಅಭಾವದಿಂದ ಊಟಕ್ಕೆ ಬಾಳೆಎಲೆ ಮೊರೆ ಹೋಗಿದ್ದಾರೆ.

ಪ್ಲೇಟ್ ಗಳನ್ನು ತೊಳೆಯಲು ನೀರು ಬೇಕಾಗುತ್ತದೆ, ಆದರೆ ಬಾಳೆಎಲೆಯಲ್ಲಿ ತಿಂದು ಬಿಸಾಡಬಹುದು. ನಾವು ಈ ಮೊದಲು ದಿನಕ್ಕೆ 12 ಸಾವಿರ ಲೀಟರ್ ನೀರು ಬಳಸುತ್ತಿದ್ದೆವು, ಈಗ 6ಸಾವಿರ ಲೀಟರ್ ನೀರು ಸಾಕಾಗುತ್ತಿದೆ, ಇನ್ನೂ ಮುಂದೆ ಬಾಳೆಲೆಯಲ್ಲೇ ಗ್ರಾಹಕರಿಗೆ ಊಟ ಒದಗಿಸಲಾಗುವುದು ಎಂದು ಸ್ವಾಗತ್ ಹೊಟೇಲ್ ನ ರಾಘವೇಂದ್ರ ರಾವ್ ಹೇಳಿದ್ದಾರೆ (KANNADA PRABHA)