X Close
X

ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ: ವಿಪಕ್ಷ ನಾಯಕ ಸಿದ್ದರಾಮಯ್ಯ


siddaramaiah-TNIE

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಸುಳ್ಳು ಆಶ್ವಾಸನೆಗಳು ಹಾಗೂ ಜನ ವಿರೋಧಿ ನೀತಿಗಳಿಂದ ಜನತೆ ಬೇಸತ್ತು ಹೋಗಿದ್ದು, ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

ತಾಲೂಕಿನ ಕುಬಟೂರು ಗ್ರಾಮದ ಮಾಜಿ ಶಾಸಕ ಎಸ್. ಮಧುಬಂಗಾರಪ್ಪ ಅವರ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ವೇಳೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಜನರನ್ನು ಕಾಡುತ್ತಿದೆ. ಆದರೆ, ಈ ಅವ್ಯವಸ್ಥೆಗೆ ಕೇಂದ್ರ ಯುಪಿಎ ಸರ್ಕಾರವನ್ನು ದೂಷಿಸುತ್ತಿದೆ ಎಂದು ಹೇಳಿದ್ದಾರೆ.

ತೈಲಬಾಂಡ್ ಖರೀದಿ ಆರಂಭ ಮಾಡಿದ್ದು ವಾಜಪೇಯಿ ಸರ್ಕಾರ, 1 ಲಕ್ಷದ 40 ಸಾವಿರ ತೈಲಬಾಂಡ್ ಖರೀದಿ ಮಾಡಲಾಗಿದೆ. ಈವರೆಗೆ ತೀರಿಸಿರುವ ಸಾಲ 3500 ಕೋಟಿ. ವಾರ್ಷಿಕ 10,000 ಕೋಟಿ ಬಡ್ಡಿ ಕಟ್ಟಲಾಗಿದೆ. 2014 ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9 ರೂಪಾಯಿ 21 ಪೈಸೆ ಡೀಸೆಲ್ 3 ರೂಪಾಯಿ 45 ಪೈಸೆ ಇತ್ತು, ಈಗ ಡೀಸೆಲ್ ಮೇಲೆ 31 ರೂಪಾಯಿ 84 ಪೈಸೆ, ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆ ಗೆ ಹೆಚ್ಚಾಗಿದೆ ಎಂದು ಅಂಕಿ ಅಂಶ ನೀಡಿದರು.

 ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಬೆಲೆ 47 ರೂಪಾಯಿ ಇತ್ತು, ಇಂದು 100 ರೂಪಾಯಿ ಆಗಿದೆ. ಪೆಟ್ರೋಲ್ ಬೆಲೆ 70 ಇತ್ತು ಇಂದು 112 ರೂಪಾಯಿ ಆಗಿದೆ. ಏಳು ವರ್ಷಗಳಲ್ಲಿ ಡೀಸೆಲ್ ಪೆಟ್ರೋಲ್ ಮೇಲೆ ಸಂಗ್ರಹವಾಗಿರುವ ತೆರಿಗೆ 23 ಲಕ್ಷ ಕೋಟಿ. ಒಟ್ಟು ಸಾಲ ಇರುವುದೇ 1‌ ಲಕ್ಷದ 40 ಸಾವಿರ ಕೋಟಿ. ನರೇಂದ್ರ ಮೋದಿ ಅವರೇ ಜನರಿಗೇಕೆ ಸುಳ್ಳು ಹೇಳ್ತೀರ? ಸತ್ಯ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಯು.ಪಿ.ಎ ಅವಧಿಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ವೊಂದಕ್ಕೆ 120- 125 ಡಾಲರ್ ಇತ್ತು. ಈಗ 70-80 ಡಾಲರ್ ಇದೆ. ಇದು 2013 ರಿಂದ 16 ರ ವರೆಗೆ 45, 46, 49 ಡಾಲರ್ ಆಗಿತ್ತು. ಆಗ ಪೆಟ್ರೋಲ್ ಬೆಲೆ ಇಳಿಕೆ ಮಾಡಿದ್ರಾ? ಇದಕ್ಕೆ ಮೋದಿಯವರ ಬಳಿ ಉತ್ತರವಿದೆಯೇ ಎಂದು ಪ್ರಶ್ನಿಸಿದರು.

 2013 ರಲ್ಲಿ ಒಂದು ಸಿಲಿಂಡರ್ ಬೆಲೆ 414 ರೂಪಾಯಿ ಇತ್ತು. ಇವತ್ತು 980 ರೂಪಾಯಿ ಆಗಿದೆ. ಮೋದಿ ಹೇಳಿದ ಅಚ್ಚೇ ದಿನ್ ಎಲ್ಲಿದೆ? ಡೀಸೆಲ್ ಬೆಲೆ ಹೆಚ್ಚಾದರೆ ಸಾಗಾಣಿಕೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತೆ. ಡೀಸೆಲ್ ಪೆಟ್ರೋಲ್ ಬೆಲೆ ಹೆಚ್ಚಾದರೆ ರೈತರಿಗೇನು ಸಮಸ್ಯೆ ಆಗಲ್ಲ ಎಂದು ಕೇಂದ್ರ ಸಚಿವರೊಬ್ಬರು ದಡ್ಡನಂತೆ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂಕಾಲು ವರ್ಷ ಆಗಿದೆ. ಈ ಅವಧಿಯಲ್ಲಿ ಸೂರಿಲ್ಲದ ಬಡವರಿಗೆ ಒಂದೇ ಒಂದು ಮನೆಯನ್ನು ಕಟ್ಟಿಸಿಕೊಟ್ಟಿಲ್ಲ. ಅದಕ್ಕಾಗಿಯೇ ನಿನ್ನೆ ನಾನು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಬಸವರಾಜ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದೆ. ಇದಕ್ಕೆ ಉತ್ತರವಿಲ್ಲ. ಅಭಿವೃದ್ಧಿ ಮೇಲೆ ಓಟು ಕೇಳೋರು ಅಭಿವೃದ್ಧಿ ಕೆಲಸ ಮಾಡಿದ್ದಾರ ಹೇಳಲಿ ಎಂದು ಸವಾಲು ಹಾಕಿದರು.

ದೇಶದಲ್ಲಿ ಸತ್ಯವನ್ನು ನುಡಿಯಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಲಖಿಮ್‍ಪುರದಲ್ಲಿ ರೈತರ ಪ್ರತಿಭಟನೆಯ ಮೇಲೆ ಕೇಂದ್ರ ಸಚಿವರ ಪುತ್ರನ ಕಾರು ಹರಿಸಿದ ಸಂದರ್ಭದಲ್ಲಿ ರೈತರಿಗೆ ಸಾಂತ್ವಾನ ಹೇಳಲು ತೆರಳಿದ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಲಾಗುತ್ತದೆ. ಬಿಜೆಪಿಯ ವಿರುದ್ಧ ಮಾತನಾಡುವವರ ಮೇಲೆ ಐಟಿ-ಇಡಿ  ದಾಳಿ ಮಾಡಿಸುವುದು. ಸತ್ಯವನ್ನು ನುಡಿದ ಮಾಧ್ಯಮಗಳಿಗೆ ನೊಟೀಸ್ ನೀಡುವುದು ಮಾಡುತ್ತಿರುವ ಬಿಜೆಪಿಗೆ ಜನತೆ ತಕ್ಕ ಉತ್ತರ ನೀಡಲಿದ್ದು, ಪ್ರಸ್ತುತ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು

(KANNADA PRABHA)