X Close
X

ಜಾತಿ ನಿಂದನೆ ಪ್ರಕರಣ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ, ಬಳಿಕ ಜಾಮೀನಿನ ಮೇಲೆ ಬಿಡುಗಡೆ


Yuvraj-Singh

ಹಿಸ್ಸಾರ್: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹರಿಯಾಣ ಪೊಲೀಸರು ಭಾನುವಾರ ಹೇಳಿದ್ದಾರೆ.

ಕಳೆದ ವರ್ಷ ಇನ್‌ಸ್ಟಾಗ್ರಾಮ್ ಚಾಟ್‌ನಲ್ಲಿ ಯುವರಾಜ್ ಸಿಂಗ್ ಅವರು ಪರಿಶಿಷ್ಟ ಜಾತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಹಂಸಿ ನಗರ ಪೊಲೀಸ್ ಠಾಣೆಯಲ್ಲಿ ಯುವರಾಜ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಯುವರಾಜ್ ಸಿಂಗ್ ಅವರನ್ನು ಬಂಧಿಸಿರುವ ಹಂಸಿ ಠಾಣಾ ಪೊಲೀಸರು ಘಟನೆಯ ಬಗ್ಗೆ ವಿಚಾರಣೆ ನಡೆಸಿದರು. ಬಳಿಕ ಹೈಕೋರ್ಟ್ ಆದೇಶದ ಮೇರೆಗೆ ಯುವರಾಜ್ ಸಿಂಗ್ ಅವರನ್ನು ಔಪಚಾರಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

"ನಾವು ಔಪಚಾರಿಕ ಬಂಧನವನ್ನು ಮಾತ್ರ ಮಾಡಿದ್ದೇವೆ ಮತ್ತು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಆದೇಶದ ಅನುಸಾರವಾಗಿ ಯುವರಾಜ್ ಸಿಂಗ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ" ಎಂದು ಪೋಲಿಸ್ ಸೂಪರಿಂಟೆಂಡೆಂಟ್ ನಿತಿಕಾ ಗಹ್ಲೌತ್ ಅವರು ಫೋನ್ ಮೂಲಕ ತಿಳಿಸಿದ್ದಾರೆ.

"ಯುವರಾಜ್ ಸಿಂಗ್ ಅವರು ಶನಿವಾರ ಹಂಸಿಗೆ ಆಗಮಿಸದರು ಮತ್ತು ನಾವು ಔಪಚಾರಿಕ ಅವರ ಬಂಧಿಸಿ ಕೆಲವು ಗಂಟೆಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು" ಎಂದು ಹಂಸಿ ಡಿಎಸ್ಪಿ ವಿನೋದ್ ಶಂಕರ್ ಅವರು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಲವು ದಿನಗಳ ಹಿಂದೆ ಯುವರಾಜ್ ಸಿಂಗ್ ಹೈಕೋರ್ಟ್​​ಗೆ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದರು. ಈ ಕಾರಣದಿಂದಾಗಿ, ಹಂಸಿ ಪೊಲೀಸರು ಆತನನ್ನು ಔಪಚಾರಿಕವಾಗಿ ಬಂಧಿಸಿ 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಆ ಬಳಿಕ ನಿರೀಕ್ಷಣಾ ಜಾಮೀನು ಪತ್ರಗಳ ಆಧಾರದ ಮೇಲೆ ಬಿಡುಗಡೆ ಮಾಡಿದ್ದಾರೆ.

(KANNADA PRABHA)