X Close
X

ಚಿಕ್ಕೋಡಿ: ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ: ಪೊಲೀಸರ ವಿರುದ್ಧ ಕ್ರಮಕ್ಕೆ ಆರೋಗ್ಯ ಸಹಾಯಕರ ಆಗ್ರಹ


chikkodi-story

ಚಿಕ್ಕೋಡಿ: ಬೆಳಗಾವಿಯಲ್ಲಿ ಆರೋಗ್ಯ ಸಿಬ್ಬಂದಿ ಮೇಲೆ ಪೊಲೀಸ್‍ ಪೇದೆ ಹಿಗ್ಗಾಮುಗ್ಗಾ ಥಳಿಸಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೇ ತಪ್ಪಿತಸ್ಥ ಪೊಲೀಸ್‍ರ ಮೇಲೆ ಕ್ರಮ ಕೈಗೊಳ್ಳದೇ ಹೋದರೇ ಏಪ್ರಿಲ್ 1 ರಿಂದ ಕೊರೋನಾ ಕಾರ್ಯ ಸ್ಥಗಿತಗೊಳಿಸಿ ಆರೋಗ್ಯ ಸಹಾಯಕರು ಇಡೀ  ರಾಜ್ಯಾಧ್ಯಂತ ಮುಷ್ಕರ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಹಾಗೂ ಮೇಲ್ವಿಚಾರಕರ ಕೇಂದ್ರ ಸಂಘದ ರಾಜ್ಯಾಧ್ಯಕ್ಷ ಬಿ.ಎ.ಕುಂಬಾರ ಎಚ್ಚರಿಕೆ ನೀಡಿದರು.

ರವಿವಾರ ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಡಿಎಚ್‍ಒ ಕಚೇರಿಯಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಮಹೇಶ ಡೊಳ್ಳಿನ ಮೇಲೆ ಬೆಳಗಾವಿ ಪೊಲೀಸರು ಲಾಠಿಯಿಂದ ಹೊಡೆದು ತೀವ್ರವಾಗಿ ಹಲ್ಲೆ ಮಾಡಿ ಅನ್ಯಾಯ ಎಸಗಿದ್ದಾರೆ. ಆರೋಗ್ಯ  ಇಲಾಖೆ ಸಿಬ್ಬಂದಿ ಐಡಿ ಕಾರ್ಡ್, ಹೆಲ್ಮೇಟ್, ಮಾಸ್ಕ್ ಧರಿಸಿಕೊಂಡು ಕರ್ತವ್ಯಕ್ಕೆ ಹೋಗುವ ಸಂದರ್ಭದಲ್ಲಿ ಪೊಲೀಸರು ಅನ್ಯಾಯವಾಗಿ ಹೊಡೆದು ಹಲ್ಲೆ ಮಾಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಎಂದು ಹೇಳಿದರೂ ಕೂಡಾ ಸಿಬ್ಬಂದಿ ಮಾತು ಕೇಳದೇ ಹಲ್ಲೆ ಮಾಡಿ ಕೈಮೂಳೆ  ಮುರಿದಿದ್ದು, ಈಗ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಬ್ಬಂದಿ ಮೇಲೆ ಆದ ಅನ್ಯಾಯ ಮತ್ತೊಮ್ಮೆ ಮರುಕಳಿಸಬಾರದೆಂದು ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಏ,1 ರಿಂದ ಇಡೀ ರಾಜ್ಯಾಧ್ಯಂತ ಆರೋಗ್ಯ  ಸಹಾಯಕರು ಮುಷ್ಕರ ನಡೆಸುವ ತಿರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ಕೊರೋನಾ ಹೋಗಲಾಡಿಸಲು ಆರೋಗ್ಯ ಇಲಾಖೆ ಪಾತ್ರವೂ ಮುಖ್ಯವಾಗಿದೆ. ಕಳೆದ ಹದಿನೈದು ದಿನಗಳಿಂದ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದು, ಈಗ ಪೊಲೀಸರ ಕಡೆ ಹೊಡೆತ ತಿನ್ನುವುದು ಯಾವ ನ್ಯಾಯ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆಯಲ್ಲಿ ಕುಳಿತರೇ  ಸಾರ್ವಜನಿಕರಿಗೆ ಆರೋಗ್ಯ ಸೇವೆ ಯಾರು ಕೊಡುತ್ತಾರೆ. ತಕ್ಷಣಾ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

(KANNADA PRABHA)