X Close
X

ಕೋವಿಡ್ 3ನೇ ಅಲೆ ಸಾವಿನ ಲೆಕ್ಕಪರಿಶೋಧನೆ ನಡೆಸಲು ಸಮಿತಿ ರಚಿಸಿ: ಸರ್ಕಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ


corona-bengaluru

ಬೆಂಗಳೂರು: ರಾಜ್ಯದಲ್ಲಿ 3ನೇ ಅಲೆ ವೇಳೆ ದಾಖಲಾದ ಕೋವಿಡ್-19 ಸಾವುಗಳ ಹಿಂದಿನ ಕಾರಣಗಳನ್ನು ಪರಿಶೀಲಿಸಲು ರಾಜ್ಯ ಮಟ್ಟದ ಡೆತ್ ಆಡಿಟ್ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ ಮಾಡಿದೆ. 

ರಾಜ್ಯದಲ್ಲಿ ಒಟ್ಟಾರೆ 39,250 ಸಾವುಗಳು ಸಂಭವಿಸಿದ್ದು, ಅತೀ ಹೆಚ್ಚು ಸಾವುಗಳು ಸಂಭವಿಸಿದ ರಾಜ್ಯಗಳ ಪೈಕಿ ದೇಶದಲ್ಲಿಯೇ ಕರ್ನಾಟಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನ 1,42,940 ಮಹಾರಾಷ್ಟ್ರ ಇದ್ದರೆ, 57,296 ಸಾವಿನೊಂದಿಗೆ ಕೇರಳ ರಾಜ್ಯ ಎರಡನೇ ಸ್ಥಾನದಲ್ಲಿದೆ. 

“ಮೂರನೇ ಅಲೆ ಸಾವಿನ ಲೆಕ್ಕಪರಿಶೋಧನೆ ನಡೆಸಲು ರಾಜ್ಯ ಮಟ್ಟದ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವಂತೆ ಪ್ರಧಾನ ಕಾರ್ಯದರ್ಶಿಯನ್ನು ಮನವಿ ಮಾಡಿಕೊಂಡಿದ್ದೇವೆ. ವೈದ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಬಿಬಿಎಂಪಿಯ ಪ್ರತಿನಿಧಿಗಳು ಒಳಗೊಂಡಿರುವ ಸಮಿತಿ ರಚಿಸುವಂತೆ ಸಲಹೆಯನ್ನೂ ನೀಡಲಾಗಿದೆ. ಇದು ಸಾವಿನ ಹಿಂದಿನ ನಿಖರ ಕಾರಣಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಚಿಕಿತ್ಸೆಯ ತಂತ್ರಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ರೂಪಿಸುವಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್ ಡಿ ಅವರು ಹೇಳಿದ್ದಾರೆ. 

ಕರ್ನಾಟಕವು ಕೋವಿಡ್ ಉತ್ತಮ ವರದಿ ವ್ಯವಸ್ಥೆಗಾಗಿ ಮೆಚ್ಚುಗೆ ಪಡೆದಿದೆ. ರಾಜ್ಯವು ಜಿಲ್ಲಾ ಮಟ್ಟದಲ್ಲಿ ದೃಢವಾದ ವರದಿ ಮಾಡುವ ವ್ಯವಸ್ಥೆಯನ್ನು ಹೊಂದಿದ್ದು, ಇದರಿಂದ ನಿಖರವಾದ ಸಂಖ್ಯೆಗಳು ತಿಳಿದುಬರುತ್ತಿದೆ. ಭಾರತದಲ್ಲಿ ಸಾವಿನ ಸಂಖ್ಯೆ ಶನಿವಾರಕ್ಕೆ 5 ಲಕ್ಷ ದಾಟಿದ್ದು, ಓಮಿಕ್ರಾನ್ ನಿಂದಾಗಿ ರಾಜ್ಯದಲ್ಲಿ ಕೋವಿಡ್ ಮೂರನೇ ಅಬ್ಬರಿಸಿ, ರೂಪಾಂತರಿ ವೈರಸ್ ನಿಂದಾಗಿ 3ನೇ ಅಲೆ ವೇಳೆ 960 ಸಾವುಗಳು ಸಂಭವಿಸಿವೆ.

ಎಲ್ಲಾ ಜಿಲ್ಲೆಗಳ ಸಂಘಟಿತ ಮಾಹಿತಿಯಿಂದ ರಾಜ್ಯದಲ್ಲಿ ಜನವರಿ ತಿಂಗಳಿನಲ್ಲಿ 645 ಸಾವುಗಳು. ಆಸ್ಪತ್ರೆಗಳ ಹೊರತುಪಡಿಸಿ ಮನೆಗಳಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ಪ್ರತಿಯೊಂದು ಕೋವಿಡ್ -19 ಸಾವುಗಳ ಬಗ್ಗೆ ಡೆತ್ ಆಡಿಟ್ ಮಾಡಲು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಜಿಲ್ಲೆಗಳಿಂದ ವರದಿಗಳು ಬರಲಿದೆ. ಆದರೂ, ವರದಿಗಳನ್ನು ಮೌಲ್ಯಮಾಪನ ಮಾಡುವುದು ಅಗತ್ಯವಿದ್ದು, ಇದಕ್ಕೆ ಸಮಿತಿಯ ರಚನೆ ಅಗತ್ಯವಿದೆ ಎಂದು ರಂದೀಪ್ ಹೇಳಿದ್ದಾರೆ. 

ಕೆಲ ಜಿಲ್ಲೆಗಳ ವರದಿಗಳು ತೀವ್ರ ಉಸಿರಾಟದ ತೊಂದರೆ (ARDS) ಸಾವಿಗೆ ಪ್ರಮುಖ ಕಾರಣವೆಂದು ಎಂದು ಹೇಳಿವೆ. ಸುಮಾರು ಶೇ.30-35ರಷ್ಟು ಪ್ರಕರಣಗಳು ತೀವ್ರ ಅಸ್ವಸ್ಥತೆ ಹೊಂದಿರುವ ಜನರು ಕೋವಿಡ್ ಸೋಂಕಿಗೊಳಗಾಗಿ ಪರಿಸ್ಥಿತಿ ಗಂಭೀರಗೊಂಡು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ಶೇ.52ರಷ್ಟು ರೋಗಿಗಳ ಸಾವು ಆಸ್ಪತ್ರೆಗೆ ದಾಖಲಾದ ಎರಡು ದಿನಗಳ ನಂತರ ಸಂಭವಿಸಿರುವುದಾಗಿ ತಿಳಿಸಿವೆ. 

ಈ ವರದಿಗಳನ್ನು ಗಮನಿಸಿದರೆ ರೋಗಿಗಳು ಮೊದಲೇ ಆಸ್ಪತ್ರೆಗ ದಾಖಲಾಗಿದ್ದರೆ ಸಾವುಗಳನ್ನು ತಡೆಯಬಹುದಿತ್ತು. ಓಮಿಕ್ರಾನ್ ಪ್ರಭಾವ ಕಡಿಮೆ ಎಂಬ ತಪ್ಪು ಕಲ್ಪನೆಯಿಂದಾಗಿ ಜನರು ಆಸ್ಪತ್ರೆಗೆ ದಾಖಲಾಗುವುದನ್ನು ನಿಯಂತ್ರಿಸುತ್ತಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ರಂದೀಪ್ ಅವರು ವಿವರಿಸಿದ್ದಾರೆ. 

ಮೂಲಗಳ ಪ್ರಕಾರ ಆರೋಗ್ಯ ಇಲಾಖೆಯ ಈ ಮನವಿಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಶೀಘ್ರದಲ್ಲೇ ಸಮಿತಿಯನ್ನು ರಚಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. 

ಸಮಿತಿ ರಚನೆಯಾಗಿದ್ದೇ ಆದರೆ, 3ನೇ ಅಲೆ ವೇಳೆ ಸಂಭವಿಸಿದ ಸಾವುಗಳು ಎಷ್ಟು, ಆ ಸಾವುಗಳ ಹಿಂದಿನ ಕಾರಣ ಹಾಗೂ ಮುಂದೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು ಎಂಬುದನ್ನು ತಿಳಿಯಲು ಸಹಾಯ ಮಾಡಲಿದೆ. 

(KANNADA PRABHA)