X Close
X

ಒಲಂಪಿಕ್ಸ್ ಇತಿಹಾಸದಲ್ಲೇ ಮೊದಲು! ಬಾಕ್ಸಿಂಗ್ ಕಣಕ್ಕಿಳಿಯಲಿದ್ದಾರೆ 9 ಭಾರತೀಯರು


jordanamman
Bengaluru:

ಅಮ್ಮನ್(ಜೋರ್ಡಾನ್): ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕ ವಿಜೇತ ಮನೀಶ್ ಕೌಶಿಕ್ (63 ಕೆಜಿ) ಬುಧವಾರ ನಡೆದ ಏಷ್ಯಾ / ಓಷಿಯಾನಿಯಾ ಒಲಿಂಪಿಕ್ಸ್ ಕ್ವಾಲಿಫೈಯರ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಸೊಗಸಾದ ಪ್ರದರ್ಶನ ನೀಡಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಭಾರತ ಟೋಕೊಯೊ ಒಲಿಂಪಿಕ್ಸ್ ನಲ್ಲಿ ಒಟ್ಟು ಒಂಬತ್ತು ಬಾಕ್ಸರ್ ಗಳ ತಂಡವನ್ನು ಕಳುಹಿಸಲಿದೆ.

2012 ರಲ್ಲಿ ನಡೆದಿದ್ದ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಎಂಟು ಸ್ಥಾನ ಪಡೆದುಕೊಂಡಿತ್ತು. ಅದು ಈಗ ಒಂಬತ್ತು ಒಲಿಂಪಿಕ್ಸ್ ಸ್ಥಾನ ಪಡೆದು ಹಳೆಯ ದಾಖಲೆಯನ್ನು ಮೀರಿಸಿದೆ. 2016 ರಲ್ಲಿ ನಡೆದ ಕೊನೆಯ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಆರು ಕೋಟಾ ಗೆದ್ದುಕೊಂಡಿತ್ತು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಐವರು ಮಹಿಳಾ ಬಾಕ್ಸರ್ ಗಳು ಹಾಗೂ ನಾಲ್ವರು ಪುರುಷರ ಬಾಕ್ಸರ್ ಗಳು ರಿಂಗ್ ಪ್ರವೇಶಿಸಲಿದ್ದಾರೆ.

ಬುಧವಾರ ನಡೆದ ಬಾಕ್ಸ್ ಆಫ್ ಬೌಟ್‌ನಲ್ಲಿ ಆಸ್ಟ್ರೇಲಿಯಾದ ಹ್ಯಾರಿಸನ್ ಗಾರ್ಸೈಡ್ ಅವರನ್ನು 4–1ರಿಂದ ಸೋಲಿಸುವ ಮೂಲಕ ಮನೀಶ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದು ಬೀಗಿದರು. ಈ ಪಂದ್ಯದಲ್ಲಿ ಮನೀಶ್ ಗಾರ್ಸೈಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಏಕಪಕ್ಷೀಯವಾಗಿ ಅವರನ್ನು ಸೋಲಿಸಿದರು.

ಆರು ಬಾರಿ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ (51 ಕೆಜಿ) ಸೆಮಿಫೈನಲ್ಸ್ ನಲ್ಲಿ ಚೀನಾದ ಯುವಾನ್ ಚಾಂಗ್ ವಿರುದ್ಧ 2-3 ಅಂತರದಲ್ಲಿ ಸೋತ ನಂತರ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.