X Close
X

ಒಂದಲ್ಲ, ಎರಡಲ್ಲ.. 5 ಬಾರಿ ಆಸಿಸ್ ಪಡೆಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಏಕೈಕ ತಂಡ ಟೀಂ ಇಂಡಿಯಾ


gabba-pant

ಬ್ರಿಸ್ಬೇನ್: ಕ್ರಿಕೆಟ್ ಜಗತ್ತಿನಲ್ಲಿ ವೆಸ್ಟ್ ಇಂಡೀಸ್ ಎರಾ ಬಳಿಕ ಆಸ್ಟ್ರೇಲಿಯಾ ತಂಡವನ್ನು ಅತ್ಯಂತ ಬಲಿಷ್ಠ ತಂಡ ಎಂದೇ ಕರೆಯಲಾಗುತ್ತಿತ್ತು. ಆದರೆ ಇಂತಹ ಬಲಿಷ್ಠ ತಂಡದ ಸತತ ಗೆಲುವಿನ ನಾಗಾಲೋಟಕ್ಕೆ 2ಕ್ಕಿಂತ ಹೆಚ್ಚು ಬಾರಿ ಬ್ರೇಕ್ ಹಾಕಿದ ಏಕೈಕ ತಂಡ ಎಂದರೆ ಅದು ಭಾರತ.

ಹೌದು..ಒಂದಲ್ಲ, ಎರಡಲ್ಲ.. 5 ಬಾರಿ ಆಸಿಸ್ ಪಡೆಯ ಗೆಲುವಿನ ನಾಗಾಲೋಟಕ್ಕೆ ಟೀಂ ಇಂಡಿಯಾ ಬ್ರೇಕ್ ಹಾಕಿದೆ. ಈ ಹಿಂದೆ 16 ಟೆಸ್ಟ್ ಪಂದ್ಯಗಳನ್ನು ಗೆದ್ದು ಅಜೇಯ ತಂಡವಾಗಿ ಉಳಿದಿದ್ದ ಆಸ್ಟ್ರೇಲಿಯಾ ತಂಡವನ್ನು ಇದೇ ಭಾರತ ತಂಡ 2001ರ ಕೋಲ್ಕತಾ ಟೆಸ್ಟ್ ಪಂದ್ಯದ ವೇಳೆ ಸೋಲಿಸಿ ಈ ಅಜೇಯ  ದಾಖಲೆಗೆ ಬ್ರೇಕ್ ಹಾಕಿತ್ತು. ಇದೇ ರೀತಿಯ ದಾಖಲೆ 2008ರಲ್ಲೂ ಆಸಿಸ್ ನಿರ್ಮಾಣ ಮಾಡಿತ್ತು. 2008ರ ಪರ್ತ್ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿತ್ತು. ಅಷ್ಟು ಮಾತ್ರವಲ್ಲ.. ಇದೇ ಪರ್ತ್ ಟೆಸ್ಟ್ ಪಂದ್ಯದಲ್ಲಿ ಅಂದರೆ WACA (ವೆಸ್ಟರ್ನ್ ಆಸ್ಟ್ರೇಲಿಯನ್ ಕ್ರಿಕೆಟ್ ಅಸೋಸಿಯೇಷನ್) ಕ್ರೀಡಾಂಗಣದಲ್ಲಿ  ಆಸಿಸ್ ಪಡೆಯನ್ನು ಸೋಲಿಸಿದ ಮೊದಲ ಮತ್ತು ಏಕೈಕ ಏಷ್ಯನ್ ಕ್ರಿಕೆಟ್ ತಂಡ ಎಂಬ ಕೀರ್ತಿಗೂ ಟಿಂ ಇಂಡಿಯಾ ಭಾಜನವಾಗಿದೆ.

ಇನ್ನು ಸತತ 19 ಏಕದಿನ ಪಂದ್ಯಗಳನ್ನು ಗೆದ್ದು ಆಸ್ಟ್ರೇಲಿಯಾ ನಿರ್ಮಿಸಿದ್ದ ದಾಖಲೆಗೂ ಬ್ರೇಕ್ ಹಾಕಿದ್ದು, ಇದೇ ಟೀಂ ಇಂಡಿಯಾ ಎಂಬುದು ಗಮನಾರ್ಹ.. 2016ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆಸಿಸ್ ಪಡೆ ಟೀಂ ಇಂಡಿಯಾಗೆ ಶರಣಾಗುವ ಮೂಲಕ ಆ ಅಪರೂಪದ ದಾಖಲೆಗೆ ಬ್ರೇಕ್ ಬಿದ್ದಿತ್ತು.

 

ಇದೀಗ ಇಂದು ಅಂದರೆ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಟೀಂ ಇಂಡಿಯಾ ಇಂತಹುದೇ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ತಂಡದ ಅಬೇಧ್ಯ ಕೋಟೆ ಎಂದೇ ಪರಿಗಣಿತವಾಗಿದ್ದ ಗಬ್ಬಾ ಕ್ರೀಡಾಂಗಣದಲ್ಲಿ ಕಳೆದ 32 ವರ್ಷಗಳಿಂದ ಜಗತ್ತಿನ ಯಾವುದೇ ತಂಡ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿರಲಿಲ್ಲ.  ಗಬ್ಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡ ಒಟ್ಟು 62 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ಪೈಕಿ 40 ಪಂದ್ಯಗಳನ್ನು ಗೆದ್ದಿದೆ. ಕೇವಲ 8 ಪಂದ್ಯಗಳನ್ನು ಮಾತ್ರ ಸೋತಿದೆ. ಈ ಪೈಕಿ ನಾಲ್ಕು ಪಂದ್ಯಗಳನ್ನು ಇಂಗ್ಲೆಂಡ್ ವಿರುದ್ಧ ಸೋತಿದ್ದು, 3 ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಸೋತಿದೆ. ನ್ಯೂಜಿಲೆಂಡ್ ವಿರುದ್ಧ ಒಂದು  ಪಂದ್ಯವನ್ನು ಸೋತಿತ್ತು. ಇದೇ ಕಾರಣಕ್ಕೆ ಇದನ್ನು ಆಸಿಸ್ ಪಡೆಯ ಅಬೇಧ್ಯ ಕೋಟೆ ಎಂದೇ ಕರೆಯಲಾಗುತ್ತಿತ್ತು. 

ಕೊನೆಯದಾಗಿ ಈ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡ 1988ರಲ್ಲಿ ಟೆಸ್ಟ್ ಪಂದ್ಯ ಜಯಿಸಿತ್ತು. ಅದೇ ಕೊನೆ.. ಆ ಬಳಿಕ ಜಗತ್ತಿನ ಯಾವುದೇ ಕ್ರಿಕೆಟ್ ತಂಡ ಗಬ್ಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿರಲಿಲ್ಲ. ಆದರೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ  ತಂಡ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಗಳ ಅಂತರದಲ್ಲಿ ಸೋಲಿಸುವ ಮೂಲಕ ಈ ಕ್ರೀಡಾಂಗಣದಲ್ಲಿ 32 ವರ್ಷಗಳ ಬಳಿಕ ಆಸಿಸ್ ಪಡೆಯನ್ನು ಸೋಲಿಸಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. 
 

(KANNADA PRABHA)