X Close
X

ಎಕ್ಸಾಮ್ ಹಾಲ್ ನಿಂದ ಕೋವಿಡ್ ಕೇರ್ ಸೆಂಟರ್ ಗೆ: ತುಮಕೂರು ಶಿಕ್ಷಕನ ಕರುಣಾಜನಕ ಕಥೆ!


tmk-new

ತುಮಕೂರು: ಎಸ್ ಎಸ್ ಎಲ್ ಸಿ ಪರೀಕ್ಷೆ  ಮೇಲ್ವಿಚಾರಕನಾಗಿ ಹಾಜರಾಗಿದ್ದ 35 ವರ್ಷದ ಶಿಕ್ಷಕರೊಬ್ಬರು ಕೊರೋನಾ ಕಾರಣದಿಂದಾಗಿ ಪರೀಕ್ಷಾ ಹಾಲ್ ನಿಂದ ನೇರವಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿದ್ದಾರೆ.

ಕುಣಿಗಲ್ ತಾಲೂಕಿನ ಅಮೃತೂರು ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕನಿಗೆ ಕರ್ತವ್ಯ ನಿಗದಿ ಪಡಿಸಲಾಗಿತ್ತು. ಅಲ್ಲಿ ಒಬ್ಬ ವಿದ್ಯಾರ್ಥಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಆತನ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರಿಗೂ ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ,ಶಿಕ್ಷಕ ಕೂಡ ಸ್ವಯಂ ಪ್ರೇರಿತರಾಗಿ ತಮ್ಮ ಕುಟುಂಬಸ್ಥರಿಗೆ ತೊಂದರೆಯಾಬಾರದು ಎಂದು ನಿರ್ಧರಿಸಿ ಕೊರೋನಾ ಪರೀಕ್ಷೆಗೆ ತೆರಳಿದ್ದರು.

ಜುಲೈ 1 ರಂದು ಅವರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಜುಲೈ 5 ರಂದು ಪರೀಕ್ಷೆ ಬಂದಿತ್ತು, ಆದರೆ ಅವರಿಗೆ ಆಘಾತ ಏನು ಆಗಲಿಲ್ಲ, ಏಕೆಂದರೆ ಅವರಿಗೆ ಮೊದಲೇ ನಿರೀಕ್ಷೆಯಿತ್ತು, ಅದಾದ ನಂತರ ಅವರು ಮನೆಯಿಂದ ದೂರ ಉಳಿದರು, ಹೀಗಾಗಿ  ಮುದ್ದು ಮಗಳ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಲಾಗಲಿಲ್ಲ.

ಜುಲೈ 7 ರಂದು ಅವರನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿತವಾಗಿರುವ ತುಮಕೂರಿನ ಕಲಾ ಕ್ರೀಡಾ ಸಂಕೀರ್ಣಕ್ಕೆ ಶಿಫ್ಟ್ ಮಾಡಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿಯಾಗಿರುವ ಅವರ ಪತ್ನಿ ಕೂಡ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಮೂರು ವರ್ಷದ ಮಗಳಿಗೆ ಪರಿಸ್ಥಿತಿ ಅರ್ಥ ಮಾಡಿಸಲು ಸಾಧ್ಯವಾಗುತ್ತಿಲ್ಲ,ಯಾವಾಗ ಬರುತ್ತಿಯಾ ಎಂದು ಕೇಳುತ್ತಿರುತ್ತಾಳೆ ಎಂದು ಶಿಕ್ಷಕ ತಮ್ಮ ನೋವು ತೋಡಿಕೊಂಡಿದ್ದಾರೆ.

ಕೊರೋನಾ ಟೆಸ್ಟ್ ಫಲಿತಾಂಶ ಶಿಘ್ರವಾಗಿ ಬಂದರೆ ಸೋಂಕಿತ ವ್ಯಕ್ತಿ ಮುಂದಿನ ನಿರ್ಧಾರಗಳನ್ನು ಬೇಗ ತೆಗೆದುಕೊಂಡು ಹೆಚ್ಚಿನ ಜನರಿಗೆ ಸೋಂಕು ತುವುದನ್ನು ತಡೆಯಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಆಹಾರ, ಕುಡಿಯಲು ಮತ್ತು ಸ್ನಾನ ಮಾಡಲು ಬಿಸಿನೀರು, ಶೌಚಾಲಯಗಳು ಮತ್ತು ವೈದ್ಯರ ಚಿಕಿತ್ಸಾ ಸೌಲಭ್ಯ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ವೆಂಟಿಲೇಷನ್ ತುಂಬಾ ಚೆನ್ನಾಗಿದೆ, ಸೋಂಕಿನ ಅನುಮಾನವಿದ್ದರೆ ದಯಮಾಡಿ ನೀವೆ ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ಹೋಗಿ ಪರಿಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಜೊತೆಗೆ ಕೊರೋನಾ ಬಂದವರನ್ನು ಗುಣಮುಖರಾದವರನ್ನು ಜನರು ಎಲ್ಲರಂತೆ ಸಾಮಾನ್ಯವಾಗಿ ನಡೆಸಿಕೊಳ್ಳಬೇಕು,ಇದು ಕೇವೆಲ ಕೊರೋನಾ ರೋಗಿಯ ವಿಷಯ ಮಾತ್ರವಲ್ಲ, ನಮ್ಮ ಸಮಾಜ, ನಮ್ಮ ಕುಟುಂಬ ಎಲ್ಲರೂ ಕೊರೋನಾ ಬಗ್ಗೆ ಎಚ್ಚರದಿಂದಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆನ್‌ಲೈನ್‌ನಲ್ಲಿ ಓದುವ ವಿವಿಧ ಮಾಹಿತಿಗಾಗಿ ಶಿಕ್ಷಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡುತ್ತಿದ್ದಾರೆ.  ಇದೇ ಕೋವಿಡ್ ಕೇರ್ ಸೆಂಟರ್ ನಲ್ಲಿ ರೈತ, ಹಾಲು ಮಾರಾಟಗಾರ, ವ್ಯಾನ್ ಡ್ರೈವರ್,  ಸೇರಿದಂತೆ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಪರಸ್ಪರ ನೈತಿಕ ಸ್ಥೈರ್ಯ ತುಂಬುತ್ತಿದ್ದಾರೆ.


 

(KANNADA PRABHA)