X Close
X

ಉಪಚುನಾವಣೆ: ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಸಿಎಂ, ಮಾಜಿ ಸಿಎಂ


Bommai-BSY

ಹಾನಗಲ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶುಕ್ರವಾರ ಹಾನಗಲ್ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಹುಬ್ಬಳ್ಳಿಯಿಂದ ಈ ಇಬ್ಬರು ನಾಯಕರು ಒಂದೇ ವಾಹನದಲ್ಲಿ ಹಾನಗಲ್ಲಿನ ಬೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿದರು.

ಬಹಿರಂಗ ಪ್ರಚಾರ ಆರಂಭಕ್ಕೂ ಮುನ್ನ ಬೊಮ್ಮನಹಳ್ಳಿಯ ಶ್ರೀ ಗುರುಪಾದೇಶ್ವರ ವಿರಕ್ತ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಶುಭಾಶೀರ್ವಾದಗಳನ್ನು ಪಡೆದರು. ಅಲ್ಲದೇ ಪಂಡಿತ ಪುಟ್ಟರಾಜ ಗವಾಯಿಗಳವರ ಜನ್ಮಸ್ಥಳ ದೇವರ ಹೊಸಪೇಟೆಗೆ ಭೇಟಿ ನೀಡಿದರು.

ಬಳಿಕ ಇಬ್ಬರು ನಾಯಕರು ಹಾನಗಲ್ ವಿಧಾನಸಭಾ ಕ್ಷೇತ್ರದ ಬಮ್ಮನಹಳ್ಳಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿಯವರು, ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದಾಗ 2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಥಾನಗಳನ್ನು ಗೆದ್ದಿತು. ಬಳಿಕ ರಾಹುಲ್ ಗಾಂಧಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿ, ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಗಳಾದ ಬಳಿಕ ಕಾಂಗ್ರೆಸ್ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ನಾಯಕತ್ವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜನರು ಬಿಜೆಪಿಗೆ ದೊಡ್ಡ ಮಟ್ಟದ ಬೆಂಬಲವನ್ನು ನೀಡಬೇಕಿದೆ. ಆ ಬೆಂಬಲವು ಮತ ಎಣಿಕೆ ಆರಂಭದಲ್ಲಿಯೇ ಕಾಂಗ್ರೆಸ್ ನಾಯಕರು ಮತಎಣಿಕೆ ಕೊಠಡಿಯಿಂದ ಕಾಲ್ಕಿತ್ತುವಂತಿರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಇದೇ ವೇಳೆ ಭಾವನಾತ್ಮಕ ಮಾತುಗಳನ್ನೂ ಆಡಿರುವ ಯಡಿಯೂರಪ್ಪ ಅವರು, ನಾನೀಗ ಮಾಜಿ ಮುಖ್ಯಮಂತ್ರಿ. ಆದರೂ ಜನರ ಹೃದಯದಲ್ಲಿ ನನ್ನ ಮೇಲೆ ಬಹಳಷ್ಟು ಪ್ರೀತಿ ಇದೆ. ಸಿಎಂ ಉದಾಸಿಯವರು ಹಾವೇರಿಯನ್ನು ಮಾದರಿ ಜಿಲ್ಲೆ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಅವರ ಮಾಡಿದ್ದ ಕಾರ್ಯವನ್ನು ಜನರು ಮುಂದಿನ 100 ವರ್ಷಗಳಾದರೂ ಜನರು ನೆನಪಿಸಿಕೊಳ್ಳುತ್ತಾರೆಂದು ಹೇಳಿದ್ದಾರೆ.

ಹಾನಗಲ್ ಕ್ಷೇತ್ರದ ಜನರು ಮತ ಹಾಕಲು ಹಣ ಪಡೆದುಕೊಳ್ಳುತ್ತಿದ್ದಾರೆಂದು ಕಾಂಗ್ರೆಸ್ ಇಲ್ಲಿನ ಜನರಿಗೆ ಅವಮಾನ ಮಾಡುತ್ತಿದ್ದಾರೆ. ಹಣ ನೀಡುವುದು, ಜಾತಿ ಬಳಕೆ ಮಾಡಿಕೊಳ್ಳುವುದು ಕಾಂಗ್ರೆಸ್'ನ ಸಂಸ್ಕೃತಿಯಾಗಿದೆ ಎಂದು ತಿಳಿಸಿದ್ದಾರೆ.

ಬಳಿಕ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಬೊಮ್ಮಾಯಿಯವರು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ವಿಧಾನಸಭೆ ಚುನಾವಣೆಗೂ ಮುನ್ನ 15 ಲಕ್ಷ ಮನೆ ನಿರ್ಮಾಣ ಸೇರಿದಂತೆ ಹಲವು ಯೋಜನೆ, ಅನುದಾನ ಘೋಷಣೆ ಮಾಡಿದ್ದರುಯ ಆದರೆ ಅದಾವುದೂ ಜಾರಿಗೆ ಬಂದಿಲ್ಲ ಎಂದರು.

(KANNADA PRABHA)