X Close
X

ಅತಂತ್ರ ಸ್ಥಿತಿಯಲ್ಲೂ ಪೊಲೀಸರಿಗೆ ಸಿಹಿ ಸುದ್ದಿ, ಶೇ. 12.5 ರಷ್ಟು ವೇತನ ಹೆಚ್ಚಳ


hdk-5
ಬೆಂಗಳೂರು: ರಾಜಕೀಯ ಅಸ್ಥಿರತೆಯ ನಡುವೆಯೂ ರಾಜ್ಯ ಸರ್ಕಾರ ಪೊಲೀಸರಿಗೆ ಸಿಹಿಸುದ್ದಿ ನೀಡಿದ್ದು, ವೇತನ ಪರಿಷ್ಕರಣೆ ಹಾಗೂ ಬಡ್ತಿ ತಾರತಮ್ಯ ನಿವಾರಣೆ ಸೇರಿದಂತೆ ಪೊಲೀಸರ ಅನೇಕ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿದ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ನೀಡಿರುವ ವರದಿ ಜಾರಿಗೆ ತೀರ್ಮಾನಿಸಿದೆ.
 
ಪೊಲೀಸರ ವೇತನ ಪರಿಷ್ಕರಣೆ ಕುರಿತು ನೀಡಲಾಗಿರುವ ವರದಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಗಳವಾರ ಅಂಕಿತ ಹಾಕಿದ್ದು, ಇಂದು ಸಂಜೆ ಅಧಿಕೃತ ಆದೇಶ ಹೊರಬೀಳಲಿದೆ. ಶೇ. 30ಕ್ಕೆ ಬದಲಾಗಿ ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ವರದಿ ಜಾರಿಯಿಂದ ಸರ್ಕಾರದ ಮೇಲೆ 630 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದ್ದು, ಆರ್ಥಿಕ ಹೊರೆಯನ್ನು ತಪ್ಪಿಸಲು ಮೂಲವರದಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.  

 
2016 ಜೂನ್ ನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವೇತನ ಪರಿಷ್ಕರಣೆ ಸಂಬಂಧ ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಈ ಸಂಬಂಧ ವರದಿ ಸಲ್ಲಿಸುವಂತೆ ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ರಚಿಸಿತ್ತು.
 
ಕೇರಳ, ಆಂಧ‍್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ವೇತನ ಆಧರಿಸಿ ರಾಜ್ಯ ಪೊಲೀಸರಿಗೆ ಶೇ.30 ರಷ್ಟು ವೇತನ ಹೆಚ್ಚಿಸುವಂತೆ ಗೃಹ ಸಚಿವರಾಗಿದ್ದ ಡಾ.ಪರಮೇಶ್ವರ್ ಅವರಿಗೆ ಸಮಿತಿ ವರದಿ ಸಲ್ಲಿಸಿತ್ತು. ಸಮಿತಿ ರಚನೆಯಾದ ಮೂರೇ ತಿಂಗಳಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತಾದರೂ ಇದೂವರೆಗೂ ಜಾರಿಯಾಗಿರಲಿಲ್ಲ. ಸರ್ಕಾರಕ್ಕೆ ಆರ್ಥಿಕವಾಗಿ ಹೊಣೆ ಹೆಚ್ಚಾಗುವ ಕಾರಣ ಹಣಕಾಸು ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.
 
ಎಂ.ಬಿ.ಪಾಟೀಲ್ ಅವರು ಮೈತ್ರಿ ಸರ್ಕಾರದಲ್ಲಿ ಗೃಹಮಂತ್ರಿಯಾದ ಬಳಿಕ ಔರಾದ್ಕರ್ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದರು. ಅಲ್ಲದೆ ವರದಿ ಜಾರಿಗೆ ಮೇಲಿಂದ ಮೇಲೆ ಒತ್ತಡಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮುಖ್ಯಮಂತ್ರಿ ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ವರದಿಯ ಶಿಫಾರಸುಗಳ ಬಗ್ಗೆ ಸಮಾಲೋಚನೆ ನಡೆಸಿದ್ದ ಎಂ.ಬಿ.ಪಾಟೀಲ್, ಆದಷ್ಟು ಬೇಗ ಸಿಹಿ ಸುದ್ದಿ ನೀಡುವುದಾಗಿ ಹೇಳಿದ್ದರು. (KANNADA PRABHA)