X Close
X

ವಿಶ್ವ ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರ್: ಶತಮಾನದ ನೆನಪು


bksiyyangaryoga
Bengaluru:ಯೋಗಗುರು ಬೆಳ್ಳೂರು ಕೃಷ್ಣಮಾಚಾರ್‌ ಸುಂದರರಾಜ ಅಯ್ಯಂಗಾರ್‌, ಹೀಗೆಂದರೆ ಬಹುಷಃ ಬಹಳಷ್ಟು ಜನರಿಗೆ ತಿಳಿಯಲಿಕ್ಕಿಲ್ಲ. ಅದೇ  ಯೋಗದೀಕ್ಷಾ ದುರಂಧರ, ವಿಶ್ವ ಯೋಗಾಚಾರ್ಯ ಪ್ರೊ.ಬಿ.ಕೆ.ಎಸ್‌. ಅಯ್ಯಂಗಾರ್‌ ಎಂದರೆ ತಕ್ಷಣ ಅರ್ಥವಾಗುತ್ತದೆ. ಇಂದು (ಡಿಸೆಂಬರ್ 14) ಅವರು ನಮ್ಮೊಡನಿದ್ದಿದ್ದರೆ ನೂರು ವರ್ಷಗಳಾಗುತ್ತಿತ್ತು. ಭಾರತ ಜಗತ್ತಿಗೆ ನೀಡಿದ ಬಹುದೊಡ್ಡ ಕೊಡುಗೆ  ಯೋಗ.ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದಿರುವ ಈ ಯೋಗ ಪರಂಪರೆಯನ್ನು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿಮಾನ್ಯ ಮಾಡಲಾಗಿದೆ. ಹೀಗೆ ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಡುವಲ್ಲಿ ಯೋಗಾಚಾರ್ಯ ಬಿ. ಕೆ. ಎಸ್‌.ಅಯ್ಯಂಗಾರ್‌ ಅವರ ಕೊಡುಗೆ ಅಪಾರವಾದದ್ದು. ಹೀಗಾಗಿ ಅವರ ನೂರನೇ ಜನ್ಮದಿನಾಚರಣೆಯಂದು ಅವರನ್ನು ಸ್ಮರಿಸುವ ನೆಪದಲ್ಲಿ ಅವರ ಜೀವನ, ಸಾಧನೆಯನ್ನೊಮ್ಮೆ ಮೆಲುಕು ಹಾಕುವ ಚಿಕ್ಕ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.
ಶ್ರೇಷ್ಠ ಯೋಗ ಶಿಕ್ಷಕರಾಗಿದ್ದ ಬಿಕೆಎಸ್ ಅಯ್ಯಂಗಾರರು ಹುಟ್ಟಿದ್ದು 14 ಡಿಸೆಂಬರ್ 1918ರಂದು ಕೋಲಾರ ಜಿಲ್ಲೆಯ ಬೆಳ್ಳೂರು
ಗ್ರಾಮದಲ್ಲಿ.  ಕನ್ನಡದ ಕಣ್ವ ಎಂದು ಖ್ಯಾತರಾದ ಬಿಎಂಶ್ರೀ ಹುಟ್ಟೂರು ಸಹ ಇದೇ ಆಗಿತ್ತು. ಇವರ ತಂದೆ ಕೃಷ್ಣಮಾಚಾರ್ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಬಿಕೆಎಸ್ ಒಂಬತ್ತು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಕಡುಬಡತನದ ಬಾಲ್ಯವನ್ನು ಕಂಡ ಇವರು ಸಂಬಂಧಿಕರ ಮನೆಯಲ್ಲೇ ಬೇಳೆದವರು. ಜತೆಗೆ ಇನ್‌ಫ್ಲುಯೆಂಝಾ, ವಿಷಮಜ್ವರ, ಮಲೇರಿಯಾ, ಹಾಗೂ ಕ್ಷಯರೋಗ ಸೇರಿ ಅನೇಕ ವಿಧದ ಖಾಯಿಗಲೆಗಳಿಗೆ ಇವರ ದೇಹವೇ ಆಶ್ರಯ ತಾಣವಾಗಿತ್ತು.
ಕ್ಷಯರೋಗವನ್ನು ಜಯಿಸಲು ಯೋಗದೀಕ್ಷೆಮೆಟ್ರಿಕ್ಯುಲೇಷನ್ ವರೆಗಷ್ಟೇ ವಿದ್ಯಾಭ್ಯಾಸ ನಡೆಸಿದ ಬಿಕೆಎಸ್ ತಾವು ಅನುಭವಿಸುತ್ತಿದ್ದ ಅಸಹನೀಯ ಖಾತಯಿಎಗಳಿಂದ ಪಾರಾಗಲು ಯೋಗಾಭ್ಯಾಸದ ಮೊರೆ ಹೋದದ್ದೇ ಮಉಂದೆ ಅವರನ್ನು ವಿಶ್ವಯೋಗಾಚಾರ್ಯನನ್ನಾಗುವಂತೆ ಮಾಡಿತ್ತು!
ಹದಿನೈದನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ನೆಲೆಸಿದ್ದ ತಮ್ಮ ಭಾವಮೈದುನ ಟಿ.ಕೃಷ್ಣಮಾಚಾರಿಯವರ ಬಳಿ ಎರಡು ವರ್ಷ ಕಾಲ ಯೋಗಾಭ್ಯಾಸ ನಡೆಸಿದ್ದರು. ಕೃಷ್ಣಮಾಚಾರ್ ಸಹ ಸಾಮಾನ್ಯ ಗುರುವಾಗಿರಲಿಲ್ಲ ಅವರು ಹಿಮಾಲಯದಲ್ಲಿ ಯೋಗಗುರುಗಳಿಂದ ಯೋಗ ವಿದ್ಯಾಭ್ಯಾಸ ಪಡೆದು ಅದನ್ನು ದಕ್ಷಿಣ ಭಾರತದಾದ್ಯಂತ ಪ್ರಚಾರ ಮಾಡಲು ಮೈಸೂರು ಒಡೆಯರ ಆಶ್ರಯ ಪಡೆದಿದ್ದರು.
ಒಡೆಯರ ಯೋಗಶಾಲೆಯಲ್ಲಿ ಪ್ರಧಾನ ಯೋಗಶಿಕ್ಷಕರಾಗಿದ್ದ ಕೃಷ್ಣಮಾಚಾರ್ ಅವರ ಮಾರ್ಗದರ್ಶನದಲ್ಲಿ ಬಿಕೆಎಸ್ ತಮ್ಮೆಲ್ಲಾ  ಖಾಯಿಲೆಗಳಿಗೆ ಪರಿಹಾರ ಕಂಡುಕೊಂಡರು.
ಆದರೆ ಅದೇನೂ ಅಷ್ಟು ಸುಲಭದಲ್ಲಿ ಒಲಿದ ಶಿಕ್ಷಣವಲ್ಲ, ಪ್ರಾರಂಭದಲ್ಲಿ ಅದೊಂದು ಶಿಕ್ಷೆ ಎಂಬಂದತೆ ಬಿಕೆಎಸ್ ಅವರಿಗೆ ಹಲವು ಬಾರಿ ಭಾಸವಾಗಿದ್ದಿದೆ. ಏಕೆಂದರೆ ಗುರು ಕೃಉಷ್ಣಮಾಚಾರ್ ಕಠಿಣವಾದ ಯೋಗವನ್ನು ಹೇಳುತ್ತಿದ್ದು ಅದನ್ನು ಸಾಧಿಸುವವರೆಗೂ  ಊಟವನ್ನು ಸಹ ನೀಡುತ್ತಿರಲಿಲ್ಲ. ಒಂದು ಬಾರಿ ಅದು ಎಷ್ಟು ವಿಪರೀತಕ್ಕೆ ಹೋಗಿತ್ತೆಂದರೆ ಗುರುಗಳು ಬಿಕೆಎಸ್ ಅವರಿಂದ  ಕಾಲುಗಳ ಅಗಲಿಸುವ ಆಸನ ಮಾಡಿಸಿದ್ದರು. ಆಗ ಬಿಕೆಎಸ್ ತೊಡೆಯಲ್ಲಿನ ಒಂದು ಅಸ್ಥಿಬಂಧಕ (ಲಿಗಾಮೆಂಟ್) ಕತ್ತರಿಸಿ ಹೋಗಿ ಹಲವಾರು ದಿನಗಳ ಕಾಲ ನಡೆಯಲೂ ಆಗುತ್ತಿರಲಿಲ್ಲ!
ಆದರೆ ಕಾಲಕ್ರಮೇಣ ಆಸನಗಳು ಕರಗತವಾಗುತ್ತಾ ಹೋಗಿ ದೇಹವುೀಲ್ಲಾ ವಿಧದ ಆಸನಗಳಿಗೆ ಒಗ್ಗಿಕೊಂಡಿತ್ತು, ಮಾತ್ರವಲ್ಲ ಜೀವನದಲ್ಲೇ ಪ್ರಥಮ ಬಾರಿಗೆ ತನ್ನ ಆರೋಗ್ಯದಲ್ಲಿ ಮಹತ್ವದ ಸುಧಾರಣೆಗಳಾಗುತ್ತಿದೆ ಎಂದು ಬಿಕೆಎಸ್ ಗೆ ಅರಿವಾಗಿತ್ತು.
ಮೈಸೂರಿನಿಂದ ಪುಣೆಗೆ
ಬಿಕೆಎಸ್ ಗೆ ಹದಿನೆಂಟು ವರ್ಷವಾಗಿದ್ದಾಗ ಅವರ ಭಾವಮೈದುನ, ಗುಉರು ಅವ್ರನ್ನು ಧಾರವಾಡಕ್ಕೆ ಕರೆತಂದು ಯೋಗ ಪ್ರದರ್ಶನ ಏರ್ಪಡಿಸಿದ್ದರು. ಇದು ಬಿಕೆಎಸ್ ಜೀವನದ ಮಹತ್ವದ ಘಟ್ಟವಾಗಿತ್ತು. ಅಲ್ಲಿಂದ ಮುಂದೆ ಬಿಕೆಎಸ್ ಧಾರವಾಡ, ಹುಬ್ಬಳ್ಳಿಗಳಲ್ಲಿ  ನೆಲೆಸಿ ಯೋಗತರಗತಿಗಳನ್ನು ನಡೆಸಲು ಪ್ರಾರಂಭಿಸಿದ್ದರು. ಸುಮಾರು ಒಂದು ವರ್ಷಗಳ ಕಾಲ ಧಾರವಾಡದಲ್ಲಿ ಹಲವರಿಗೆ  ಯೋಗ ತರಬೇತಿ ನೀಡಿದ್ದ ಬಿಕೆಎಸ್ ಸಿವಿಲ್ ಸರ್ಜನ್ ಡಾ. ವಿ.ಬಿ.ಗೋಖಲೆ ಅವರ ಆಹ್ವಾನದ ಮೇರೆಗೆ 1937ರಲ್ಲಿ  ಪುಣೆಗೆ ತೆರಳಿದರು
1937 ಸೆಪ್ಟೆಂಬರ್ ಮೊದಲನೆಯ ತಾರೀಖಿಗೆ ಅಯ್ಯಂಗಾರರ ಯೋಗತರಗತಿಗಳು ಪುಣೆಯ ಡೆಕ್ಕನ್ ಜಮಖಾನಾದಲ್ಲಿ ಪ್ರಾರಂಭವಾಗಿತ್ತು. ಸುಮಾರು ಮೂರು ವರ್ಷಗಳಲ್ಲಿ 600ಕ್ಕೂ ಹೆಚ್ಚು ಮಂದಿಗೆ ಯೋಗಶಿಕ್ಷಣ ನೀಡಿದ ಬಿಕೆಎಸ್ ಅವರ ಖ್ಯಾತಿಯು ಹಲವರ ಕಣ್ಣು ಕುಕ್ಕುವಂತೆ ಮಾಡಿತ್ತು. 1941ರಲ್ಲಿ ಒಂದು ಘಟನೆಯಲ್ಲಿ ಕೆಲ ಹೊಟ್ಟೆಕಿಚ್ಚಿನ ಜನರು ಬಿಕೆಎಸ್ ಯೋಗತರಗತಿಗೆ ಬೆಂಕಿ ಇಟ್ಟಿದ್ದರು. ಬೆಂಕಿಯಲ್ಲಿ ಅವರು ಉಪಯೋಗಿಸುತ್ತಿದ್ದ ಯೋಗ ಸಾಧನಗಳು, ಜಮಖಾನೆ ಎಲ್ಲಾ ಸುಟ್ಟು ಹೋಗಿದ್ದವು. ಇಇಷ್ಟಾದರೂ  ಅವರು ತಮ್ಮ ನಿರಂತರ ಯೋಗಸಾಧನೆಯನ್ನು ಮಾತ್ರ ಎಂದಿಗೂ ನಿಲ್ಲಿಸಲಿಲ್ಲ.
ವಿವಾಹ
ಬಿಕೆಎಸ್ ಅತ್ತ ಪುಣೆಯಲ್ಲಿ ಯೋಗಸಾಧನೆಯಲ್ಲಿ ನಿರತವಾಗಿದ್ದರೆ ಇತ್ತ ಅವರ ಮನೆಯವರಿಗೆ ಅವರ ನೆಲೆಯಿಲ್ಲದ ಸನ್ಯಾಸಿಯ  ಜೀವನ ಕಂಡು ಆತಂಕ ಪ್ರಾರಂಭವಾಗಿತ್ತು. ಇದೇ ಕಾರಣಕ್ಕೆ ಅವರೆಲ್ಲಾ ಸೇರಿ ಹದಿನಾರು ವರ್ಷದ ರಮಾಮಣಿ ಎಂಬ ಯುವತಿಯೊಡನೆ ಬಿಕೆಎಸ್ ವಿವಾಹ ನೆರವೇರಿಸಲು ನಿಶ್ವಯಿಸಿದರು.
ವಿಶೇಷವೆಂದರೆ ಬಿಕೆಎಸ್ ಯೋಗ ಸಾಧನೆಯೇ ನನ್ನ ಜೀವನೋದ್ದೇಶ ಎಂದುಕೊಂಡಿದ್ದ ಬಿಕೆಎಸ್ ತಾನು ಮದುವೆಯಾಗುವ  ಹುಡುಗಿಯನ್ನು ನೋಡಲೂ ಹೋಗಿರಲಿಲ್ಲ! ಜುಲೈ 11, 1943ರಂದು ಅವರ ವಿವಾಹ ನೆರವೇರಿತು. ಬಿಕೆಎಸ್ ಬಾಳಸಂಗಾತಿಯಾಗಿ  ಬಂದಿದ್ದ ರಮಾಮಣಿ ಅವರಿಗೆ ಜೀವನದುದ್ದಕ್ಕೂ ಆಧಾರಸ್ತಂಭವೆಂಬತೆ ಇದ್ದರು. ಗಂಡನ ಯೋಗಸಾಧನೆಗೆ ತಾವು ಹಿಂದಿನಿಂದ  ಬೆಂಬಲ ನೀಡುತ್ತಾ ಬಂದಿದ್ದ ರಮಾಮಣಿ ಅವರ ಕುರಿತಂತೆ ಬಿಕೆಎಸ್ "ನಾವು ಯಾವುದೇ ದ್ವಂದ್ವವಿಲ್ಲದೆ ನಮ್ಮೆರಡೂ ಆತ್ಮಗಳು  ಒಂದೇ ಎಂಬಂತೆ ಜೀವಿಸಿದ್ದೆವು" ಎಂದಿದ್ದರು.
ಗೀತಾ, ಸುನೀತಾ, ಸುಚೀತಾ, ಸುನೀಲಾ, ಸವಿತಾ ಎಂಬ ಐವರು ಹೆಣ್ಣುಮಕ್ಕಳು ಹಾಗೂ ಪ್ರಶಾಂತ ಎಂಬ ಓರ್ವ ಪುತ್ರ ಇವರಿಗೆ  ಜನಿಸಿದರು.
ಮೆನ್ಯೂಹಿನ್ ತಂದ ಭಾಗ್ಯ!
1952 ಬಿಕೆಎಸ್ ಜೀವನದಲ್ಲಿ ಮಹತ್ವದ ವರ್ಷವಾಗಿತ್ತು. ಅದೇ ವರ್ಷ ಜಗತ್ಪ್ರಸಿದ್ದ ಪಿಟೀಲು ವಾದಕರಾಗಿದ್ದ ಯಹೂದಿ ಮೆನ್ಯೂಹಿನ್  ಭಾರತಕ್ಕೆ ಆಗಮಿಸಿದ್ದರು. ಭಾರತದ ಪ್ರಥಮ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂ ಅವರ ಅತಿಥಿಯಾಗಿದ್ದ ಮೆನ್ಯೂಹಿನ್  ಗೋಣು ಹಾಗೂ ಬಲಭುಜದ ನೋವಿನಿಂದ ಬಳಲುತ್ತಿದ್ದರು. ಮುಂಬೈನಲ್ಲಿ ಮೆನ್ಯೂಹಿನ್ ಕಾರ್ಯಕ್ರಮ ನೀಡಲು ಬಂದಾಗ ಅಲ್ಲಿನ  ಓರ್ವ ಐಎಎಸ್ ಅಧಿಕಾರಿ ಅವರಿಗೆ ಪುಣೆಯಲ್ಲಿರುವ ಬಿಕೆಎಸ್ ಅವರನ್ನು ಕಾಣಲು ಹೇಳಿದ್ದರು.
ಐದು ನಿಮಿಷಗಳ ಭೇಟಿ!
ಆತನಿಗೆ ಬಿಕೆಎಸ್ ಅವರನ್ನು ಭೇಟಿಯಾಗುವುದು ಮೊದಲಾಗಿ ಇಷ್ಟವಿರಲಿಲ್ಲ ಆದರೂ ಕೇವಲ ಐದು ನಿಮಿಷಗಳ ಭೇಟಿಗಾಗಿ  ಸಮಯ ತೆಗೆದುಕೊಂಡು ಮುಂಬೈನಿಂದ ಪುಣೆಗೆ ಬೆಳಿಗ್ಗೆ ಏಳು ಗಂಟೆಗೆಲ್ಲಾ ಹಾಜರಾಗಿದ್ದರು. ಬಿಕೆಎಸ್ ಮುಂದೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಮೆನ್ಯೂಹಿನ್ ಗೆ ಬಿಕೆಎಸ್  ಕೆಲ ಆಸನಗಳನ್ನು ಸಲಹೆ ಮಾಡಿದರು.ಅವರು ಹೇಳಿದ ಆಸನಗಳ ಮಾಡುತ್ತಲೇ ಮೆನ್ಯೂಹಿನ್ ದೇಹದಲ್ಲಿ ಹೊಸ ಚೈತನ್ಯವೊಂದು ಮೂಡಿಬಂದಿತ್ತು. ಐದು ನಿಮಿಷಗಳ  ಭೇಟಿಯು ಮೂರೂವರೆ ಗಂಟೆಗಳ ಕಾಲ ವಿಸ್ತರಿಸಿತ್ತು. ಇಷ್ಟರಲ್ಲಿ ಇಬ್ಬರ ನಡುವೆ ಸ್ನೇಹವು ಬೆಳೆದು ಅದು 47 ವರ್ಷಗಳ ಬಳಿಕ  1999ರಲ್ಲಿ ಮೆನ್ಯೂಹಿನ್ ಅಸುನೀಗುವವರೆಗೂ ಈ ಮಹಾಮೈತ್ರಿ ಹಾಗೆಯೇ ಇತ್ತು.
ಬಿಕೆಎಸ್ ಅವರ ಕಾರಣದಿಂದ ಮೆನ್ಯೂಹಿನ್ ಆರಾಮವಾಗಿ ಪಿಟೀಲು ನುಡಿಸುವಂತಾಗಿತ್ತು. ಇದಕ್ಕೆ ಪ್ರತಿಯಾಗಿ ಅವರು ಒಂದು  ಬೆಲೆಬಾಳುವ ಗಡಿಯಾರವನ್ನು ಕೊಟ್ಟು ಅದರ ಹಿಂದೆ ಟು ಮೈ ವಯೋಲಿನ್ ಟೀಚರ್- ಬಿ.ಕೆ.ಎಸ್.ಐಯ್ಯಂಗಾರ್ ಎಂದು ಬರೆದಿದ್ದರು.

ವಿದೇಶಗಳಲ್ಲಿ ''ಅಯ್ಯಂಗಾರ್ ಯೋಗ'
1954ರಲ್ಲಿ ಮೆನ್ಯೂಹಿನ್ ಬಿಕೆಎಸ್ ಅಯ್ಯಂಗಾರ್ ಅವರನ್ನು ಸ್ವಿಡ್ಜರ್ ಲ್ಯಂಆಡ್ ಗೆ ಕರೆಸಿಕೊಂಡಿದ್ದರು. ಅಲ್ಲಿಯೇ ಅವರಲ್ಲಿ ಇನ್ನಷ್ಟು  ಯೋಗಶಿಕ್ಷಣವನ್ನೂ ಪಡೆದರು. ಮೆನ್ಯೂಹಿನ್ ತಮ್ಮ ಯೋಗ ಗುರುವಿನ ಪರಿಚಯವನ್ನು ಪಾಶ್ಚಾತ್ಯ ದೇಶಗಳಿಗೆ ಮಾಡಿಕೊಟ್ಟರು.  ಇದರಿಂದ ಅಯ್ಯಂಗಾರ್ ವಿದೇಶಗಳಲ್ಲಿಯೂ ಯೋಗತರಗತಿಗಳನ್ನು ತೆರೆಯಲು ಸಾಧ್ಯವಾಗಿತ್ತು. ಅವರ ಪ್ರಥಮ ಪುಸ್ತಕ ಲೈಟ್  ಆನ್ ಯೋಗ ಕ್ಕೆ ಮುನ್ನುಡಿಯನ್ನು ಸ್ವತಃ ಮೆನ್ಯೂಹಿನ್ ಬರೆದರು
ಆದರೆ ಪ್ರಾರಂಭದಲ್ಲಿ ಅಲ್ಲಿಯೂ ಅವರು ವರ್ಣಬೇಧದ ಕಠೀಣ ಕಷ್ಟಗಳನ್ನು ಎದುರಿಸಬೇಕಾಗಿತ್ತು. ಕೆಲ ದೇಶದವರು ಇವನಾರೋ  ಜಾದೂಗಾರನೆಂದು ಭಾವಿಸಿದ್ದರು. ಲಂಡನ್ ಮಹಾನಗರದಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ  ಎದುರಾಗಿತ್ತು. ಆದರೆ ಬಾಲ್ಯದಿಂದ ಕಷ್ಟಗಳ ನಡುವೆಯೇ ಬೆಳ್ದ ಬಿಕೆಎಸ್ ಅವರಿಗಿದು ಅಷ್ಟೇನೂ ಭಿನ್ನವಾಗಿ ಕಾಣಿಸಲಿಲ್ಲ. ಕಡೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇವರ ಯೋಗಸಾಧನೆ, ಯೋಗ ಶಿಕ್ಷಣಗಳು ಎಷ್ಟು ಪ್ರಚುರವಾಗಿತ್ತೆಂದರೆ ಬೆಲ್ಜಿಯಂ ರಾಣಿ ಎಲಿಜಬೆತ್, ಆರನೇ ಪೋಪ್ ಪಾಲ್ ಸಹ ಇವರ ಶಿಷ್ಯರಾಗಿದ್ದರು!
ಇನ್ನು ಭಾರತದಲ್ಲಿ  ನೆಹರು, ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್, ಅಚ್ಯುತ್ ಪಟವರ್ಧನ್, ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ, ದಿಲೀಪ್ಕುಮಾರ್ ರಾಯ್, ಸಂಗೀತಗಾರ ಅಮ್ಜದ್ ಆಲಿಖಾನ್, ಕಲಾವಿದ ಆರ್.ಕೆ. ಲಕ್ಷ್ಮಣ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಮಹಿಂದರ್ ಅಮರನಾಥ್, ರಾಹುಲ್ ದ್ರಾವಿಡ್, ಕಿರಣ್ ಮೋರೆ, ಜಹೀರ್ ಖಾನ್  ಹೀಗೆ ಅನೇಕ ಮಹನೀಯರಿಗೆ ಬಿಕೆಎಸ್ ಯೋಗ ಗುರುಗಳಾಗಿದ್ದರು.
ಅಯ್ಯಂಗಾರ್ ಯೋಗ-ಆದ್ಯಾತ್ಮಿಕ ಶಿಸ್ತು
ಬಿಕೆಎಸ್ ಅಯ್ಯಂಗಾರರಿಗೆ ಯೋಗವೆನ್ನುವುದು ಕೇವಲ ದೈಹಿಕ ವ್ಯಾಯಾಮವಷ್ಟೇ ಆಗಿರಲಿಲ್ಲ ಅದು ಆದ್ಯಾತ್ಮಿಕ ಶಿಸ್ತು ಸಹ ಆಗಿತ್ತು.  ಯೋಗವು ಆತ್ಮ ಸಾಕ್ಷಾತ್ಕಾರದ ಮಾದ್ಯಮ" ಎಂದು ಅವರು ಹೇಳುತ್ತಿದ್ದರು. ಬಿಜೆಎಸ್ ತಮ್ಮ ಜೀವಿತಾವಧಿಯಲ್ಲಿ ಸುಮಾರು  200ರಷ್ಟು ಯೋಗ ಭಂಗಿಗಳನ್ನು, ಸುಮಾರು 14 ಬಗೆಯ ಪ್ರಾಣಾಯಾಮ ಪ್ರಕ್ರಿಯೆಗಳನ್ನು ಕ್ರಮಬದ್ಧಗೊಳಿಸಿ, ಪ್ರಯೋಗಾರ್ಹ  ಯೋಗವಿದ್ಯೆಗೆ ಹೊಸ ಆಯಾಮ ಒದಗಿಸಿಕೊಟ್ಟರು.
ಯೋಗದ ಮೂಲಕ ದೇಹದ ಮೇಲೆ ಸ್ಥಿರತೆಯನ್ನು ಸಾಧಿಸಿಕೊಳ್ಳುವುದು ಹೇಗೆಂದು ಇವರು ತೋರಿಸಿಕೊಟ್ಟ ರೀತಿಗೆ ಇಡೀ ಜಗತ್ತು  ತಲೆಬಾಗಿತ್ತು. 1970ರ ಅವಧಿಯಲ್ಲಿ ಮೊದಲಬಾರಿಗೆ ಬಿಕೆಎಸ್ ಈ ಹೊಸ ವಿಧಾನದ ಯೋಗವನ್ನು ಪರಿಚಯಿಸಿದ್ದರು. ಉಸಿರಿನ  ಮೂಲಕ ನಿಯಂತ್ರಣ ಸಾಧಿಸುವುದಲ್ಲದೆ ದೇಹದ ವಿವಿಧ ಭಾಗಗಳನ್ನು  ಆಸನಕ್ಕೆ ಒಳಪಡಿಸಿ ದೇಹದ ಮೇಲೆ ಸ್ಥಿರತೆಯನ್ನು ಸಾಧಿಸುವ ಕ್ರಮವೇ ಅವರ ಹೊಸ ಯೋಗ ವಿಧಾನವಾಗಿತ್ತು. ಅದುವೇ ಅಯ್ಯಂಗಾರ್ ಯೋಗ ಎಂದು ಜಗತ್ ಮನ್ನಣೆ ಗಳಿಸಿತ್ತು.
ಪುಸ್ತಕಗಳ ಮೂಲಕ ಯೋಗ ಪ್ರಚಾರ
ಬಿಕೆಎಸ್ ಪ್ರಕಟಿಸಿದ ಪುಸ್ತಕರಗಳ ಸಂಖ್ಯೆಯೂ ದೊಡ್ಡದಿದೆ. ಅವುಗಳಲ್ಲಿ  ಲೈಟ್ ಆನ್ ಯೋಗ (1966), ಲೈಟ್ ಆನ್  ಪ್ರಾಣಾಯಾಮ (1978),  ಆರ್ಟ್ ಆಫ್ ಯೋಗ (1985) ಲೈಟ್ ಆನ್ ಯೋಗ ಸೂತ್ರಾಸ್ ಆಫ್ ಪತಂಜಲಿ ಅತ್ಯಂತ ಮಹತ್ವವಾದವು.
ಪ್ರಶಸ್ತಿ-ಪುರಸ್ಕಾರಗಳು
ವಿಶ್ವದ ನಾನಾ ಕಡೆ ಯೋಗ ಶಿಕ್ಷಣದ ಮೂಲಕ ಹೆಸರಾದ ಬಿಕೆಎಸ್ ಅಯ್ಯಂಗಾರ್ ಅವರಿಗೆ ಸಾಕಷ್ಟು ಮನ್ನಣೆ ಗೌರವಗಳು ಅರಸಿ  ಬಂದಿದ್ದವು. ಅವುಗಳಲ್ಲಿ  ಪದ್ಮಶ್ರೀ(1991), ಪದ್ಮ ಭೂಷಣ(2002), ಪದ್ಮ ವಿಭೂಷಣ(2014) ಪ್ರಶಸ್ತಿ ಅತ್ಯಂತ ಶ್ರೇಷ್ಠವಾದದ್ದು.
ಇನ್ನು  ಜಗದ್ವಿಖ್ಯಾತ ಟೈಮ್ಸ್ ನಿಯತಕಾಲಿಕವು 2004ರಲ್ಲಿ ಬಿಕೆಎಸ್ ಅಯ್ಯಂಗಾರರನ್ನು ವಿಶ್ವದ ನೂರು ಪ್ರಭಾವಶಾಲಿ ವ್ಯಕ್ತಿಗಳಲ್ಲಿ  ಒಬ್ಬರೆಂದು ಗುರುತಿಸಿತ್ತು.
2011ರಲ್ಲಿ ಚೀನಾ ಅಂಚೆ ಇಲಾಖೆ ಬಿಕೆಎಸ್ ಅವರ ಗೌರವಾರ್ಥ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿತ್ತು.  ಆಕ್ಸ್ ಫರ್ಡ್  ಶಬ್ದಕೋಶದಲ್ಲಿ ಸಹ "ಅಯ್ಯಂಗಾರ್" ಎಂಬ ಶಬ್ದವಿದ್ದು ಇದಕ್ಕೆ "ದೇಹದ ಪರಿಪೂರ್ಣ ಭಂಗಿಗಾಗಿ ಬೆಲ್ಟ್, ಮರದ ಇಟ್ಟಿಗೆಯಂತಹಾ  ಸಾಧನ ಬಳಸುವ ಹಠಯೋಗದ ಒಂದು ಮಾರ್ಗ" ಎಂದು ಅರ್ಥ ನೀಡಲಾಗಿದೆ!
ಡಿಸೆಂಬರ್2015ರಲ್ಲಿ ಅಯ್ಯಂಗಾರರ 97ನೇ ಜನ್ಮದಿನದಂದು ಗೂಗಲ್ ವಿಶೇಷ ಡೂಡಲ್ ರಚಿಸಿಆವರಿಗೆ ಗೌರವ ಸಮರ್ಪಿಸಿತ್ತು.
"ನನ್ನ ದೇಹವೇ ಒಂದು ದೇವಾಲಯ, ಆಸನಗಳೇ ನನ್ನ ಪೂಜೆ, ನಾವು ಪ್ರಾಣಿಗಳಂತೆ ಭೂಮಿಮೇಲೆ ನಡೆದಾಡುತ್ತೇವೆ. ಆದರೆ  ಒಂದು ದೈವಿಕ ಚೈತನ್ಯವನ್ನು ಹೊತ್ತಿರುವ ಕಾರಣ ನಕ್ಷತ್ರಗಳೊಡನೆ ತಿರುಗಬಲ್ಲೆವು" ಎಂದಿದ್ದ ಬಿಕೆಎಸ್ ಅಯ್ಯಂಗಾರ್ 2014,  ಆಗಸ್ಟ್ 20ರಂದು ತಮ್ಮ 95ನೇ ವಯಸ್ಸಿನಲ್ಲಿ ಪುಣೆಯಲ್ಲಿ ಕಾಲವಶರಾದರು.
-ರಾಘವೇಂದ್ರ ಅಡಿಗ ಎಚ್ಚೆನ್.raghavendraadiga1000@gmail.com