X Close
X

ಲಾಕ್'ಡೌನ್ ಎಫೆಕ್ಟ್: ಶಾಲೆಗಳಿಗೆ ಸರ್ಕಾರದ ಸ್ಯಾನಿಟರಿ ಪ್ಯಾಡ್ ವಿತರಣೆ ಸ್ಥಗಿತ, ಬಟ್ಟೆಗಳನ್ನೇ ಪ್ಯಾಡ್ ಆಗಿ ಬಳಸುತ್ತಿರುವ ಗ್ರಾಮೀಣ ವಿದ್ಯಾರ್ಥಿನಿಯರು


sanitary-pad

ಬೆಂಗಳೂರು: ಕೊರೋನಾ ಲಾಕ್'ಡೌನ್ ಪರಿಣಾಮ ಶಾಲೆಗಳು ಬಂದ್ ಆಗಿರುವ ಕಾರಣ ಸ್ಯಾನಿಟರಿ ಪ್ಯಾಡ್ ವಿತರಣೆಯನ್ನು ಸರ್ಕಾರ ಸ್ಥಗಿತಗೊಳಿಸಿದ್ದು, ಇದೀಗ ಬೇರಾವುದೇ ದಾರಿಯಿಲ್ಲದ ಕಾರಣ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿನಿಯರು ಇದೀಗ ಬಟ್ಟೆಗಳನ್ನೇ ಪ್ಯಾಡ್ ಗಳನ್ನಾಗಿ ಬಳಕೆ ಮಾಡುತ್ತಿದ್ದಾರೆ. 

ಕೇಂದ್ರ ಸರ್ಕಾರ ಕಿಶೋರಿ ಶಕ್ತಿ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಪ್ರತೀ ತಿಂಗಳು ಸ್ಯಾನಿಟರಿ ನ್ಯಾಪ್ಕಿನ್ಸ್ ಗಳನ್ನು ನೀಡುತ್ತಿತ್ತು. ಆದರೆ, ಕೊರೋನಾ ಪರಿಣಾಮ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. 

ಮುಟ್ಟಿನ ಸಮಯದಲ್ಲಿ ಬಟ್ಟೆ ಬದಲಾಗಿ ಸ್ಯಾನಿಟರಿ ಪ್ಯಾಡ್ ಬಳಕೆ ಮಾಡುತ್ತೇನೆಂದು ಕಳೆದ ಮೂರು ವರ್ಷಗಳಿಂದಲೂ ನಾನು ನನ್ನ ಪೋಷಕರ ಮನವೊಲಿಸಲು ಪ್ರಯತ್ನ ನಡೆಸುತ್ತಲೇ ಇದ್ದೇನೆ. ಶಾಲೆಯಲ್ಲಿ ಉಚಿತವಾಗಿ ನೀಡುತ್ತಿದ್ದು, ಹಣ ವ್ಯಯಿಸುವ ಅಗತ್ಯವಿಲ್ಲ ಎಂದೂ ಹೇಳಿದೆ. ಇದೀಗ ಲಾಕ್'ಡೌನ್ ಪರಿಣಾಮ ಸರ್ಕಾರ ವಿತರಣೆಯನ್ನೂ ನಿಲ್ಲಿಸಿದೆ. ಇದೀಗ ನನಗೆ ಬೇರಾವುದೇ ಆಯ್ಕೆಗಳಿಲ್ಲ. ಹಾಗಾಗಿ ಪಟ್ಟೆಯನ್ನು ಬಳಕೆ ಮಾಡುತ್ತಿದ್ದೇನೆಂದು ಕೊಪ್ಪಳ ಜಿಲ್ಲೆಯ ಹಿತ್ನಾಳ್ ಗ್ರಾಮದ ವಿದ್ಯಾರ್ಥಿನಿ ರಾಧಾ (14) ಹೇಳಿದ್ದಾರೆ. 

ಇದು ವಿದ್ಯಾರ್ಥಿನಿ ರಾಧಾ ಒಬ್ಬರ ಕಥೆಯಲ್ಲ. ರಾಜ್ಯದಲ್ಲಿರುವ ಬಹುತೇಕ ಗ್ರಾಮೀಣ ವಿದ್ಯಾರ್ಥಿನಿಯರ ಪರಿಸ್ಥಿತಿ ಇದೇ ಆಗಿದೆ. 

ಸಂಧ್ಯಾ ಎಂಬ ವಿದ್ಯಾರ್ಥಿನಿ ಮಾತನಾಡಿ, ನಮ್ಮ ಸಮಸ್ಯೆಯನ್ನು ಸರ್ಕಾರ ಸಂಪೂರ್ಣವಾಗಿ ಮರೆತಂತಿದೆ. ಪ್ರತೀ ತಿಂಗಳು ಮುಟ್ಟಾಗುವುದನ್ನು ಕೊರೋನಾ ತಡೆಯುವುದಿಲ್ಲ. ಶಾಲೆಯೂ ಬಂದ್ ಆಗಿದ್ದು, ಸ್ಯಾನಿಟರಿ ಪ್ಯಾಡ್ ವಿತರಣೆ ಕೂಡ ನಿಂತು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ನಮ್ಮ ಗ್ರಾಮದಲ್ಲಿ ಮನೆ ಮನೆಗೆ ಮಾಸ್ಕ್ ವಿತರಿಸುವ ಕಾರ್ಯಗಳು ನಡೆಯುತ್ತಿವೆ. ಆದರೆ, ಸ್ಯಾನಿಟರಿ ಪ್ಯಾಡ್ ಗಳನ್ನು ನೀಡುತ್ತಿಲ್ಲ. ಇದು ಅಗತ್ಯ ವಸ್ತುವಲ್ಲವೇ? ನಾನು ಯಾರನ್ನು ಕೇಳಬೇಕು? ಮುಂದಿನ ತಿಂಗಳು ನಮಗೆ ಪರೀಕ್ಷಿಯಿದೆ. ಪರೀಕ್ಷೆ ಸಂದರ್ಭದಲ್ಲಿ ಮುಟ್ಟಾದರೆ, ಬಟ್ಟೆಗಳ ಪ್ಯಾಡ್ ಗಳು ನಮಗೆ ಸಮಸ್ಯೆಯನ್ನು ತಂದೊಡ್ಡುತ್ತದೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಹೇಳಿಕೊಂಡಿದ್ದಾರೆ. 

ಈ ಹಿಂದೆ ಇದೇ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಎನ್'ಜಿಎಗಳು ಸ್ಯಾನಿಟರಿ ನ್ಯಾಪ್ಕಿನ್ಸ್ ಗಳನ್ನು ಬಳಕೆ ಮಾಡುವಂತೆ ಜಾಗೃತಿ ಮೂಡಿರುವ ಕಾರ್ಯಗಳನ್ನು ಮಾಡಿದ್ದರು. ಆದರೆ, ಇದೀಗ ಸಹಾಯ ಹಸ್ತ ಚಾಚುತ್ತಿರುವವರು ಮಾತ್ರ ಬೆರಳೆಣಿಕೆಯಷ್ಟಿದೆ. 

ಬಟ್ಟೆ ಬಳಕೆ ಓಕೆ, ಆದರೆ, ಅದನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುದರ ಬಗ್ಗೆ ಬಹುತೇಕ ವಿದ್ಯಾರ್ಥಿನಿಯರಿಗೆ ತಿಳುವಳಿಕೆಯಿಲ್ಲ. ಸ್ಯಾನಿಟರಿ ಪ್ಯಾಡ್ ಬಳಕೆ ಮಾಡುವುದಾಗಿ ನಾವೇನೋ ಪೋಷಕರ ಮನವೊಲಿಸಿದ್ದೇವೆ. ಆದರೆ, ಸರ್ಕಾರ ಇದೀಗ ವಿತರಣೆ ಸ್ಥಗಿತಗೊಳಿಸಿರುವುದು ಸಮಸ್ಯೆ ತಂದೊಡ್ಡಿದೆ. ಸರ್ಕಾರ ಮತ್ತೆ ವಿತರಣೆ ಆರಂಭಿಸಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ. 

(KANNADA PRABHA)