X Close
X

ರಾತ್ರೋ ರಾತ್ರಿ ಬದಲಾದ ಆಟ: ದಾವಣಗೆರೆ 22ನೇ ಮೇಯರ್ ಆಗಿ ಬಿಜೆಪಿಯ ಎಸ್.ಟಿ. ವಿರೇಶ್ ಆಯ್ಕೆ


dvg-new

ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್ ಆಗಿ ಎಸ್.ಟಿ. ವೀರೇಶ್, ಉಪ ಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಬುಧವಾರ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ  ಮೀಸಲಾದ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ 25ನೇ ವಾರ್ಡಿನ ಎಸ್.ಟಿ. ವೀರೇಶ್, ಕಾಂಗ್ರೆಸ್‌ನಿಂದ 38ನೇ ವಾರ್ಡಿನ ಗಡಿಗುಡಾಳ ಮಂಜುನಾಥ ನಾಮಪತ್ರ ಸಲ್ಲಿಸಿದ್ದರು.

ಎಸ್ಸಿ ಮಹಿಳಾ ಮೀಸಲಾದ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ 44 ನೇ ವಾರ್ಡಿನ  ಶಿಲ್ಪಾ ಜಯಪ್ರಕಾಶ್, ಕಾಂಗ್ರೆಸ್‌ನಿಂದ 36ನೇ ವಾರ್ಡಿನ ನಾಗರತ್ನಮ್ಮ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿ ಅಭ್ಯರ್ಥಿಗಳಿಗೆ 29 ಹಾಗೂ ಕಾಂಗ್ರೆಸ್‍ ಅಭ್ಯರ್ಥಿಗಳಿಗೆ 22 ಮತಗಳು ಬಿದ್ದವು. ಏಳು ಮತದಾರರು ಚುನಾವಣೆಗೆ ಗೈರು ಹಾಜರಾಗಿದ್ದರು.  ಕಳೆದ ಚುನಾವಣೆಯಲ್ಲಿ ಮೇಯರ್ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್​ನ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಇರುವಾಗಲೇ ಶಿವಕುಮಾರ್​ ರಾತ್ರಿ ಬಿಜೆಪಿ ಸೇರಿ ಕಾಂಗ್ರೆಸ್​ಗೆ ಶಾಕ್ ನೀಡಿದರು‌. ದಾವಣಗೆರೆ ಮಹಾನಗರ ಪಾಲಿಕೆಯ ಸದಸ್ಯ ಹಾಗೂ ವಿಶ್ವ ಹಿಂದು ಪರಿಷತ್​ನ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವಕುಮಾರ್ ದೇವರಮನೆ ಸಂಸದ ಜಿಎಂ ಸಿದ್ದೇಶ್ವರ್, ದಾವಣಗೆರೆ ಉತ್ತರ ಮತ ಕ್ಷೇತ್ರದ ಶಾಸಕ ಎಸ್​.ಎ ರವೀಂದ್ರನಾಥ್, ಮೇಯರ್ ಅಜಯ್ ಕುಮಾರ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಮೊದಲೇ ಬಿಜೆಪಿ ಮುಖಂಡರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಮೇಯರ್ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಎಂ.ಎಲ್.ಸಿ ಯ ಜಿ ರಘು ಆಚಾರ್, ಯು.ಬಿ.ವೆಂಕಟೇಶ್ ಮತ್ತು ಕೆ.ಸಿ.ಕೊಂಡಯ್ಯ ಗೈರಾಗಿದ್ದರು. 

ಮತ್ತೊಂದೆಡೆ, ಬಿಜೆಪಿ ಮಂತ್ರಿಗಳಾದ ಆರ್.ಶಂಕರ್, ಸಂಸದ ಜಿ ಎಂ ಸಿದ್ದೇಶ್ವರ, ಶಾಸಕ ಎಸ್ ಎ ರವೀಂದ್ರನಾಥ್, ಎಂಎಲ್ ಸಿಗಳಾದ ತೇಜಸ್ವಿನಿ ಗೌಡ, ಚಿದಾನಂದ ಗೌಡ ಅವರು ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ನಾಮಿನಿ ಎಸ್ ಟಿ ವೀರೇಶ್ ಮತ್ತು ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗುವಂತೆ ನೋಡಿಕೊಂಡರು.

(KANNADA PRABHA)