ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದಲ್ಲಿ ಸುಮಾರು 120 ಯುವಕ-ಯುವತಿಯರು ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಉದ್ದಕ್ಕೂ ಈ ಯುವಕ ಯುವತಿಯರು ಪುನೀತ್ ರಾಜ್ ಕುಮಾರ್ ಜೊತೆ ತೆರೆ ಹಂಚಿಕೊಂಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಸಿನಿಮಾ ಏಪ್ರಿಲ್ 1ರಂದು ರಿಲೀಸ್ ಆಗಲಿದೆ, ಸಿನಿಮಾದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಗಳಿಗೆ ಬದಲು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
ಸುಮಾರು 2000 ಯುವಕ-ಯುವತಿಯರಿಗೆ ಆಡಿಷನ್ ನಡೆಸಲಾಯಿತು. ಅದರಲ್ಲಿ 120 ಮಂದಿಯನ್ನು ಸೆಲೆಕ್ಚ್ ಮಾಡಲಾಯಿತು. ಅದರಲ್ಲಿ 2 ಭಾಗ ಮಾಡಿ ಒಂದು ಮೆಡಿಕಲ್ ಮತ್ತೊಂದು ಎಂಜಿನೀಯರಿಂಗ್ ವಿದ್ಯಾರ್ಥಿಗಳ ಗುಂಪು ಮಾಡಲಾಯಿತು.
ಈ ಯುವ ಪ್ರತಿಭೆಗಳು ರಂಗಭೂಮಿ ಹಿನ್ನೆಲೆ ಹೊಂದಿವೆ ಮತ್ತು ಕಿರುಚಿತ್ರ ನಿರ್ಮಾಪಕರು ಮತ್ತು ಕಲಾವಿದರೊಂದಿಗೆ ಒಂದು ರೀತಿಯ ಒಡನಾಟವನ್ನು ಹೊಂದಿದ್ದಾರೆ. ಆಯ್ದ ಹೊಸಬರಿಗೆ ಕ್ಯಾಮೆರಾ ಮುಂದೆ ನಟಿಸಲು ತರಬೇತಿ ನೀಡಲಾಯಿತು.
ಯುವರತ್ನ ಸಿನಿಮಾ ತಂಡ 140 ದಿನಗಳ ಕಾಲ ಶೂಟಿಂಗ್ ನಡೆಸಿದ್ದು ಈ ಹೊಸ ಪ್ರತಿಭೆಗಳು 120 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಯುವರತ್ನ ಸಿನಿಮಾ ಅತಿ ನಿರೀಕ್ಷಿತ ಸಿನಿಮಾವಾಗಿದ್ದು ಸಂತೋಷ್ ಮತ್ತು ನಿರ್ಮಾಪಕ ವಿಜಯ್ ಕಿರಂಗದೂರ್ ಎರಡನೇ ಬಾರಿಗೆ ಜೊತೆಯಾಗಿದ್ದಾರೆ.
ಚಿತ್ರತಂಡ ರಾಜ್ಯದ ವಿವಿಧ ಭಾಗಗಳಲ್ಲಿ ಸಿನಿಮಾ ಪ್ರಮೋಷನ್ ನಡೆಸುತ್ತಿದೆ. ಹೋದ ಸ್ಥಳಗಳೆಲ್ಲೆಲ್ಲಾ ಪುನೀತ್ ಗೆ ಅದ್ದೂರಿ ಸ್ವಾಗತ ದೊರೆಯುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಸಿನಿಮಾ ತಂಡ ಇನ್ನೂ ಕೆಲವೇ ದಿನಗಳಲ್ಲಿ ಆಂದ್ರ ಮತ್ತು ತೆಲಂಗಾಣಗಳಲ್ಲಿ ಸಿನಿಮಾ ಪ್ರಮೋಷನ್ ಮಾಡಲಿದೆ.
(KANNADA PRABHA)