X Close
X

ಮಾಜಿ ಸಂಸದ, ಜೆಡಿಎಸ್ ಹಿರಿಯ ನಾಯಕ ರಾಜಾ ರಂಗಪ್ಪ ನಾಯಕ್ ನಿಧನ


rajarangappanayak

ರಾಯಚೂರು: ಮಾಜಿ ಸಂಸದ ಹಾಗೂ ಜೆಡಿಎಸ್ ಹಿರಿಯ ನಾಯಕ ರಾಜಾ ರಂಗಪ್ಪ ನಾಯಕ್ ಸೋಮವಾರ ಇಲ್ಲಿ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ರಂಗಪ್ಪ ಅವರು 1996ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.

1996ರ ಚುನಾವಣೆಯಲ್ಲಿ ಒಟ್ಟು ಜೆಡಿಎಸ್‌ನಿಂದ 16 ಮಂದಿ ಗೆದ್ದಿದ್ದರು. ಅದರಲ್ಲಿ ರಂಗಪ್ಪ ಕೂಡ ಒಬ್ಬರಾಗಿದ್ದರು.
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ರಂಗಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಜಲಸಂಪನ್ಮೂಲ ಸಚಿವ, ಬಿಜೆಪಿ ಹಿರಿಯ ನಾಯಕ ರಮೇಶ್ ಜಾರಕಿಹೊಳಿ ಸಂತಾಪ ಸೂಚಿಸಿ, ರಂಗಪ್ಪ ಅವರು ಅತ್ಯಂತ ಹಿಂದುಳಿದ ಪ್ರದೇಶವಾದ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಸ್ಮರಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಸಂತಾಪ:
ರಾಜಕೀಯ ಮನೆತನದ ಹಿನ್ನೆಲೆಯುಳ್ಳ ಜನಪರ ಕಾಳಜಿಯ ಮಾಜಿ ಸಂಸದರಾಗಿದ್ದ ರಾಜಾ ರಂಗಪ್ಪ ನಾಯಕ ಅವರ ನಿಧನದಿಂದಾಗಿ ಓರ್ವ ಉತ್ತಮ ವಾಕ್ಪಟು ಅವರನ್ನು ಕಳೆದುಕೊಂಡಂತಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಂತಾಪ ಸೂಚಿಸಿದ್ದಾರೆ.

ರಾಜಾ ರಂಗಪ್ಪ ನಾಯಕ ಅವರು ಮಾಜಿ ಶಾಸಕ ರಾಜಾ ವೆಂಟಕಪ್ಪ ನಾಯಕ ಅವರ ಸಹೋದರರು ಹಾಗೂ ಮಾಜಿ ಶಾಸಕ ರಾಜಾ ಕುಮಾರ ನಾಯಕ್ ಅವರ ಪುತ್ರರು. ರಾಜಾ ಕುಮಾರ ನಾಯಕ, ರಾಜಾ ವೆಂಕಟಪ್ಪ ನಾಯಕ ಹಾಗೂ ರಾಜಾ ರಂಗಪ್ಪ ನಾಯಕ ಅವರು ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಕೇಂದ್ರ ಸಚಿವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಆಪ್ತರಾಗಿದ್ದರು. ಅವರ ಒಡನಾಟ ಹಾಗೂ ಜನಪರ ಕಾಳಜಿಯನ್ನು ನೆನೆಯುತ್ತಾ, ನಿಧನರಾದ ರಾಜಾ ರಂಗಪ್ಪ ನಾಯಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಅಗಲಿಕೆ ನೋವು ಮರೆಯುವ ಶಕ್ತಿ ಕುಟುಂಬ ವರ್ಗದವರಿಗೆ ನೀಡುವಂತೆ ಆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಶಾಸಕರು ಸಂತಾಪ ವ್ಯಕ್ತಪಡಿಸಿದ್ದಾರೆ.

(KANNADA PRABHA)