ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಅವಸ್ಥೆಯ ಬಗ್ಗೆ ಸಾಕಷ್ಟು ಮಂದಿ ಸರ್ಕಾರಕ್ಕೆ ದೂರಿದ್ದಾರೆ. ಉದ್ಯಮಿಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಮಳೆಯ ಕುರಿತಾಗಿ ಸಾಕಷ್ಟು ಚರ್ಚೆ ನಡೆಸಲಾಗುತ್ತದೆ. ಸದ್ಯ ಈ ಬಗ್ಗೆ ಮಾತನಾಡಿರುವ ನಟಿ, ಮಾಜಿ ಸಂಸದೆ ರಮ್ಯಾ, ಬೆಂಗಳೂರಿನ ಶಾಸಕರ ರಿಯಲ್ ಎಸ್ಟೇಟ್ ದಂಧೆಯ ಕುರಿತಂತೆ ದನಿ ಎತ್ತಿದ್ದಾರೆ.
ಕರ್ನಾಟಕದ ಎಷ್ಟು ಶಾಸಕರು ಮತ್ತು ಸಂಸದರು ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಬೆಂಗಳೂರಿನ 28 ಶಾಸಕರುಗಳಲ್ಲಿ 26 ಮಂದಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದಾರೆಂದು ಯಾರೋ ಹೇಳಿದರು. ಇದು ದಿಗ್ಭ್ರಮೆಗೊಳಿಸುವ ಸಂಖ್ಯೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ಚುನಾವಣೆಗೆ ಸ್ಪರ್ಧೆ ಮಾಡಲು ಯಾಕೆ ಕೇವಲ ಹಣ ಇರುವವರಿಗೆ ( ಹೆಚ್ಚಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ) ನೀಡಲಾಗುತ್ತಿದೆ? ಯೋಚನೆ ಮಾಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಖರ್ಚು ಮಾಡಲು ಚುನಾವಣಾ ಆಯೋಗ ನಿಗದಿ ಪಡಿಸಿದ ಮೊತ್ತ 40 ಲಕ್ಷ ರೂ. ಆದರೆ ಚುನಾವಣೆಗಳ್ಯಾಕೆ ಕೋಟಿಗಳಲ್ಲಿ ನಡೆಯುತ್ತಿದೆ ಎಂದು ರಮ್ಯಾ ಪ್ರಶ್ನಿಸಿದ್ದಾರೆ.
ಅಲ್ಲದೆ ಈ 26 ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ ಶಾಸಕರು ‘ಜನರಿಂದ ಆಯ್ಕೆ’ಯಾದವರು. ಹೀಗಾಗಿ ದಯವಿಟ್ಟು ವೋಟ್ ಮಾಡಿ, ಸ್ವಲ್ಪ ಆಲೋಚಿಸಿ ವೋಟ್ ಮಾಡಿ. ನಗರದಲ್ಲಿರುವ ಹೆಚ್ಚಿನವರು ಮತದಾನವನ್ನೇ ಮಾಡುವುದಿಲ್ಲ. ಆದರೆ ಇಂತಹ ಪರಿಸ್ಥಿತಿ (ನೆರೆ) ಬಂದಾಗ ನಾವು ಕೋಪಗೊಳ್ಳುತ್ತೇವೆ. ನಮ್ಮ ಈ ಪರಿಸ್ಥಿತಿಗೆ ನಮ್ಮನ್ನು ನಾವೇ ದೂಷಿಸಬೇಕಿದೆ ಎಂದು ರಮ್ಯಾ ಟ್ವಿಟ್ಟರ್ ವೇದಿಕೆ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
How many MLA’s and MP’s of Karnataka have real estate business’ would you know? Someone said 26 out of 28 mla’s are into real estate That’s a staggering number!
— Divya Spandana/Ramya (@divyaspandana) September 6, 2022
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ಇತ್ತೀಚಿನ ವರದಿಯಲ್ಲಿ ರಾಜ್ಯದ ಶಾಸಕರು ಸರಾಸರಿ ದೇಶದಲ್ಲೇ ಅತ್ಯಂತ ಶ್ರೀಮಂತರು ಎಂದು ಹೇಳಿತ್ತು. ವರದಿಯಲ್ಲಿ ನಮೂದಿಸಿರುವ ಬೆಂಗಳೂರಿನ ಶಾಸಕರ ಆದಾಯವು ಅನುಮಾನಾಸ್ಪದವಾಗಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಹದೇವಪುರ, ಕೆಆರ್ ಪುರಂ, ಬೊಮ್ಮನಹಳ್ಳಿ ಶಾಸಕರನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದು, ಅವರು ಎಷ್ಟು ದಿನದಿಂದ ಶಾಸಕರಾಗಿದ್ದಾರೆ, ಅವರ ಕ್ಷೇತ್ರದ ಸಮಸ್ಯೆಗಳು ಅವರಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕೆಲ ಶಾಸಕರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ, ಇದಕ್ಕೆ ಬಿಡಿಎ ಮತ್ತು ಬಿಬಿಎಂಪಿಯೇ ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ.