X Close
X

ಬಿಜೆಪಿಯಲ್ಲಿ ಪರಿಷತ್ ಪ್ರವೇಶಕ್ಕೆ ಹಲವರ ಕಣ್ಣು; ಮೂಲ-ವಲಸಿಗರ ನಡುವೆ ಅದೃಷ್ಟ ಪರೀಕ್ಷೆ


bjpwar
Bengaluru:

ಬೆಂಗಳೂರು: ಬೆಂಗಳೂರು: ಕೊರೊನಾ ಹೋರಾಟದ ನಡುವೆ ರಾಜ್ಯ ಬಿಜೆಪಿಯಲ್ಲಿ ಅತೃಪ್ತರು ಅಸಮಾಧಾನ ಹೊರ ಹಾಕುತ್ತಿರುವ ನಡುವೆಯೇ ವಿಧಾನ ಪರಿಷತ್ ಸ್ಥಾನಕ್ಕಾಗಿ ವಲಸಿಗರು ಹಾಗೂ ಮೂಲ ಬಿಜೆಪಿಗರು ಕಣ್ಣಿಟ್ಟಿದ್ದು, ತಮ್ಮದೇ ಆದ ರೀತಿಯಲ್ಲಿ ಲಾಬಿಯನ್ನೂ ಆರಂಭಿಸಿದ್ದಾರೆ.

ಹಿರಿಯ ಶಾಸಕರ ಅತೃಪ್ತಿಯ ನಡುವೆ ವಿಧಾನ ಪರಿಷತ್ ಸ್ಥಾನಕ್ಕಾಗಿ ಮೂಲ ಹಾಗೂ ವಲಸಿಗರ ನಡುವೆ ಆಂತರಿಕ ಪೈಪೋಟಿ ಆರಂಭವಾಗಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪಗೆ ಕೊರೊನಾ ವಿರುದ್ದದ ಹೋರಾಟದ ಜೊತೆಗೆ ಪರಿಷತ್ ಪೈಪೋಟಿ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

ವಿಧಾನ ಪರಿಷತ್ತಿನಲ್ಲಿ ಜೂನ್ ತಿಂಗಳಲ್ಲಿ ಖಾಲಿಯಾಗುವ 16 ಸ್ಥಾನಗಳಲ್ಲಿ ಐದು ಸ್ಥಾನಗಳಿಗೆ ರಾಜ್ಯಪಾಲರಿಂದ ನಾಮ ನಿರ್ದೇಶನ, ಶಿಕ್ಷಕ ಹಾಗೂ ಪದವೀಧರ ತಲಾ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇನ್ನು ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಏಳು ಸ್ಥಾನಗಳಲ್ಲಿ ಆಡಳಿತ ಪಕ್ಷ ಬಿಜೆಪಿಗೆ ನಾಲ್ಕು ಸ್ಥಾನಗಳು ದೊರೆಯಲಿದ್ದು, ಈ ನಾಲ್ಕು ಸ್ಥಾನಗಳಿಗಾಗಿ ವಲಸಿಗರು ಹಾಗೂ ಮೂಲ ಪಕ್ಷದವರು ಕಣ್ಣಿಟ್ಟು ಪೈಪೋಟಿ ನಡೆಸಿದ್ದಾರೆ.

ಆಪರೇಷನ್ ವಲಸಿಗರಿಗೆ ಆದ್ಯತೆ?:

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಕಾರಣಕರ್ತರಾದ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿರುವ ಮಾಜಿ ಸಚಿವರಾದ ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅವರಿಗೆ ಪರಿಷತ್ ಟಿಕೆಟ್ ನೀಡಬೇಕು ಎನ್ನುವುದು ವಲಸಿಗರ ಬೇಡಿಕೆಯಾಗಿದೆ. ಅಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಪಕ್ಷಾಂತರದ ಸಂದರ್ಭದಲ್ಲಿಯೇ ಅವರಿಗೆ ಅವಕಾಶ ಕೊಡುವ ಭರವಸೆ ನೀಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. 

ಇವರೊಂದಿಗೆ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಮುಂಚೂಣಿಯಲ್ಲಿ ಶ್ರಮಿಸಿರುವ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕೂಡ ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ತಮ್ಮನ್ನು ಪರಿಗಣಿಸಲೇಬೇಕು ಎಂದು ಒತ್ತಡ ಕೂಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಇನ್ನು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡು ಬಿಜೆಪಿಗೆ ವಲಸೆ ಬಂದಿದ್ದ ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೆದಾರ್ ಹಾಗೂ ಬಾಬುರಾವ್ ಚಿಂಚನಸೂರ್ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಲು ಕಾರಣರಾದ ತಮ್ಮ ಶ್ರಮಕ್ಕೆ ಪರಿಷತ್ ಟಿಕೆಟ್ ನೀಡುವ ಮೂಲಕ ಬೆಲೆ ಕೊಡಬೇಕು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೂಲನಿವಾಸಿಗಳ ಕಣ್ಣು: ಎಂಟು ವರ್ಷಗಳ ನಂತರ ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬಂದಿದ್ದು ಈಗ ಪರಿಷತ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳದಿದ್ದರೆ ಮತ್ತೆ ಅವಕಾಶ ಸಿಗುವುದು ಅನುಮಾನ ಎನ್ನುವ ಕಾರಣಕ್ಕೆ ಬಿಜೆಪಿಯ ಮೂಲ ನಿವಾಸಿಗಳು ಅವರಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಕೆಜೆಪಿ ಸೇರಿದವರಲ್ಲೇ ಅನೇಕರು ತಮ್ಮ ನಿಷ್ಠೆಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ. 

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಮೋಹನ್ ಲಿಂಬಿಕಾಯಿ, ಶಂಕರ ಪಾಟೀಲ್, ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ ಪುಟ್ಟಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ್ ಸಜ್ಜನ್ ಅವರು ಮುಖ್ಯಮಂತ್ರಿಗೆ ತಮ್ಮನ್ನು ಪರಿಗಣಿಸುವಂತೆ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಇನ್ನು ಮೂಲ ಬಿಜೆಪಿಗರು ಹಾಗೂ ಸಂಘ ಪರಿವಾರದ ನಂಟಿರುವ ಕೆಲವು ಆಕಾಂಕ್ಷಿಗಳು ಸಂಘ ಹಾಗೂ ಪಕ್ಷದ ನಾಯಕರ ಮೂಲಕ ಮೇಲ್ಮನೆ ಪ್ರವೇಶದ ಕನಸು ಕಾಣುತ್ತಿದ್ದಾರೆ ಎನ್ನಲಾಗುತ್ತಿದ್ದು, ಮಾಜಿ ಶಾಸಕರಾದ ನಿರ್ಮಲಕುಮಾರ್ ಸುರಾನಾ, ವಿಶ್ವನಾಥ ಪಾಟೀಲ್ ಹೆಬ್ಬಾಳ, ಕಟ್ಟಾ ಸುಬ್ರಮಣ್ಯ ನಾಯ್ಡು, ಸುನಿಲ್ ವಲ್ಯಾಪುರೆ, ಭಾನುಪ್ರಕಾಶ್, ಲಿಂಗರಾಜ್ ಪಾಟೀಲ್, ಭಾರತಿ ಶೆಟ್ಟಿ ಸೇರಿದಂತೆ ಅನೇಕರು ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಕೆಲವರು ಸಮಾಜದ ಮುಖಂಡರು ಹಾಗೂ ಸ್ವಾಮೀಜಿಗಳ ಮೂಲಕ ನಾಯಕರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.

ವಿಜಯೇಂದ್ರ ನೇಮಕಕ್ಕೆ ಒತ್ತಡ:

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರರನ್ನು ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಪಕ್ಷದ ಒಂದು ವರ್ಗ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಾಮ ನಿರ್ದೇಶನದ ಮೇಲೆ ಹಲವರ ಕಣ್ಣು: ವಿಧಾನ ಪರಿಷತ್ತಿನಲ್ಲಿ ಖಾಲಿಯಾಗುವ ಐದು ಸ್ಥಾನಗಳಿಗೆ ನಾಮನಿರ್ದೇಶನಕ್ಕೆ ರಾಜ್ಯಪಾಲರಿಗೆ ಹೆಸರುಗಳನ್ನು ಶಿಫಾರಸ್ಸು ಮಾಡುವ ಅಧಿಕಾರವನ್ನು ಸಂಪುಟದಲ್ಲಿ ಮುಖ್ಯಮಂತ್ರಿಗೆ ನೀಡಲಾಗಿದೆ.

ಈ ಐದು ಸ್ಥಾನಗಳಿಗೆ ಮಾಜಿ ಡಿಜಿಪಿ ಶಂಕರ ಬಿದರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಮಹದೇವ ಪ್ರಕಾಶ್ ಅದೃಷ್ಟ ಒಲಿಯುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸಿನೆಮಾ ರಂಗದಿಂದ ನಟ ಜಗ್ಗೇಶ್, ನಟಿಯರಾದ ಶೃತಿ, ಮಾಳವಿಕ ಅವಿನಾಶ್ ಮೇಲ್ಮನೆ ಪ್ರವೇಶದ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಸಲಿಗ ಬಿಜೆಪಿಗರು:
ಎಚ್. ವಿಶ್ವನಾಥ್
ಎಂ.ಟಿ.ಬಿ.ನಾಗರಾಜ್
ಆರ್.ಶಂಕರ್
ಮಾಲಿಕಯ್ಯ ಗುತ್ತೇದಾರ್
ಬಾಬುರಾವ್ ಚಿಂಚನಸೂರ್
ಸಿ.ಪಿ. ಯೋಗೇಶ್ವರ್
----
ಮೂಲ ಬಿಜೆಪಿಗರು:
ನಿರ್ಮಲ ಕುಮಾರ್ ಸುರಾನಾ
ಭಾನುಪ್ರಕಾಶ್
ಕಟ್ಟಾ ಸುಬ್ರಮಣ್ಯ ನಾಯ್ಡು
ಭಾರತಿ ಶೆಟ್ಟಿ
ವಿಶ್ವನಾಥ ಪಾಟೀಲ್ ಹೆಬ್ಬಾಳ
ಸುನಿಲ್ ವಲ್ಯಾಪುರೆ
ಲಿಂಗರಾಜ್ ಪಾಟೀಲ್
---
ಮೋಹನ್ ಲಿಂಬಿಕಾಯಿ
ಶಿವರಾಜ್ ಸಜ್ಜನ್
ಶಂಕರ ಪಾಟೀಲ್
ಬಿ.ಜೆ.ಪುಟ್ಟಸ್ವಾಮಿ
--- 
ನಾಮ ನಿರ್ದೇಶನಕ್ಕೆ:
ಶಂಕರ ಬಿದರಿ
ಮನು ಬಳಿಗಾರ್
ಮಹದೇವ ಪ್ರಕಾಶ್
ಜಗ್ಗೇಶ್ 
ಶೃತಿ
ಮಾಳವಿಕ ಅವಿನಾಶ್