ಡಾಲಿ ಧನಂಜಯ್ ನಟನೆಯ ಹೊಯ್ಸಳ ಸಿನಿಮಾಗೆ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ಸ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಕೂಡ ಕುತೂಹಲ ಮೂಡಿಸಿತ್ತು. ಹಾಗಾಗಿ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ನಿರೀಕ್ಷೆ ಕೂಡ ಹೆಚ್ಚಾಗಿತ್ತು. ಧನಂಜಯ್ ನಟನೆಯ 25ನೇ ಸಿನಿಮಾ ‘ಹೊಯ್ಸಳ’ದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಇದೇ ಸಂದರ್ಭದಲ್ಲಿ ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. 2023ರ ಮಾರ್ಚ್ 30ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಕೆಆರ್‌ಜಿ ಸ್ಟೂಡಿಯೋಸ್ ಬುಧವಾರ ತಿಳಿಸಿದೆ.
ಧನಂಜಯ್, ಈ ಚಿತ್ರದಲ್ಲಿ ‘ಗುರುದೇವ ಹೊಯ್ಸಳ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ನಡೆದಿರುವ ಘಟನೆಯನ್ನು ಆಧರಿಸಿ ಹೆಣೆದಿರುವ ಕಥೆ ಇದಾಗಿದ್ದು, ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಈ ಚಿತ್ರ ನಿರ್ಮಾಣವಾಗುತ್ತಿದೆ.
‘ಮಾನ್ಸೂನ್ ರಾಗ’, ‘ತೋತಾಪುರಿ’, ‘ಹೆಡ್‌ಬುಷ್’ ಹೀಗೆ ಸಾಲು ಸಾಲು ಚಿತ್ರಗಳ ಬಿಡುಗಡೆಗೆ ಎದುರುನೋಡುತ್ತಿರುವ ನಟ ‘ಡಾಲಿ’ ಧನಂಜಯ್, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಿನಿಮಾ ಬ್ಯಾಂಕ್ ಹೊಂದಿರುವ ನಟರಲ್ಲಿ ಮುಂಚೂಣಿಯಲ್ಲಿದ್ದಾರೆ. ಕೆಆರ್ ಜಿ ಸ್ಟುಡಿಯೋಸ್ ಮೂಲಕ ಕಾರ್ತಿಕ್ – ಯೋಗಿ ಜಿ ರಾಜ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.
ಚಿತ್ರಕ್ಕೆ ವಿಜಯ್ ನಾಗೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಗಣೇಶ್ ಅಭಿನಯದ ‘ಗೀತಾ’ ಚಿತ್ರವನ್ನು ವಿಜಯ್ ನಾಗೇಂದ್ರ ನಿರ್ದೇಶನ ಮಾಡಿದ್ದರು. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಅಮೃತ ಅಯ್ಯಂಗಾರ್, ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಮುಂತಾದ ಕಲಾವಿದರಿದ್ದಾರೆ.
(KANNADA PRABHA)