X Close
X

ಜಗ್ಗೇಶ್ -ಅದಿತಿ ಪ್ರಭುದೇವ ನಟನೆಯ 'ತೋತಾಪುರಿ' ಬಿಡುಗಡೆಗೆ ದಿನಾಂಕ ಫಿಕ್ಸ್!


jaggesh-new
Bengaluru:

ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಸಖತ್ ಸುದ್ದಿ ಮಾಡುತ್ತಿರುವ ಹಾಗೂ ನವರಸನಾಯಕ ಜಗ್ಗೇಶ್ ಅಭಿನಯದ ಹಾಗೂ ನೀರ್​​ದೋಸೆ ಸಿನಿಮಾ‌ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ ತೋತಾಪುರಿ ಬಿಡುಗಡೆಗೆ ಸಿದ್ಧಗೊಂಡಿದೆ. ಸೆಪ್ಟಂಬರ್ 30 ರಂದು  ತೋತಾಪುರಿ ಸಿನಿಮಾ ರಿಲೀಸ್ ಆಗಲು ರೆಡಿಯಾಗಿದೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ರಿಲೀಸ್ ಬಗ್ಗೆ ಅಧಿಕೃತ  ಘೋಷಣೆ ಮಾಡಿದೆ. ಈ ಹಿಂದೆ ನೀರ್ ದೋಸೆ ಸಿನಿಮಾದಲ್ಲಿ ಕೆಲಸ ಮಾಡಿದ್ದ ವಿಜಯ ಪ್ರಸಾದ್ ಮತ್ತು ಜಗ್ಗೇಶ್ ತೋತಾಪುರಿ ಮೂಲಕ ಒಂದಾಗಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಜಗ್ಗೇಶ್, ತಮ್ಮ ಹಿಂದಿನ ಸಿನಿ ಪ್ರಯಾಣದ ನೆನಪನ್ನು ಸ್ಮರಿಸಿದರು. ಸಾಮಾಜಿಕ ಮಾಧ್ಯಮಗಳ ಬಗ್ಗೆಯೂ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು.

ಈ ಚಿತ್ರದಲ್ಲಿ ಎರಡು ಶೇಡ್​ನಲ್ಲಿ ಜಗ್ಗೇಶಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮಾಡೋದಿಕ್ಕೆ ಮೊದಲಿಗೆ ನಿರ್ಮಾಪಕ ಕೆ ಸುರೇಶ್​ಗೆ ಇರುವ ತಾಳ್ಮೆ ಮುಖ್ಯ ಕಾರಣ. ಯಾಕೆಂದರೆ ದೊಡ್ಡ ತಾರ ಬಳಗ, ಜೊತೆಗೆ ಎರಡು ವರ್ಷ ಕೊರೊನಾ ಎಂಬ ಹೆಮ್ಮಾರಿಯಿಂದ ತಪ್ಪಿಸಿಕೊಂಡು ಈ ಸಿನಿಮಾ ಮಾಡಲಾಗಿದೆ. ನಿರ್ಮಾಪಕರ ತಾಳ್ಮೆ ಮೆಚ್ಚಬೇಕು ಎಂದು ಹೇಳಿದರು.

ಗೋವಿಂದಾಯ ನಮಃ, ಶ್ರಾವಣಿ ಸುಬ್ರಹ್ಮಣ್ಯ ಮತ್ತು ಶಿವಲಿಂಗ  ಹಿಟ್ ಚಿತ್ರಗಳ ನಿರ್ಮಾಪಕ ಕೆಎ ಸುರೇಶ್ ಮೊನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತೋತಾಪುರಿ ನಿರ್ಮಿಸಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಎಂದು ಹೇಳಲಾದ ಈ ಚಿತ್ರವನ್ನು 100 ದಿನಗಳ ಶೆಡ್ಯೂಲ್‌ನಲ್ಲಿ ಚಿತ್ರೀಕರಿಸಲಾಗಿದೆ. ನಿರ್ದೇಶಕ ವಿಜಯ ಪ್ರಸಾದ್ ಜೊತೆ ಸಿದ್ಲಿಂಗು, ನೀರ್​​ದೋಸೆ, ಪೆಟ್ರೋಮ್ಯಾಕ್ಸ್ ಸಿನಿಮಾಗಳನ್ನು ಮಾಡಿರುವ ಖಾಯಂ ನಟಿ ಅಂದ್ರೆ ಅದು ಬಹುಭಾಷೆ ನಟಿ ಸುಮನಾ ರಂಗನಾಥ್. ಈ ಚಿತ್ರದಲ್ಲಿ ಸಿಸ್ಟರ್ ವಿಕ್ಟೋರಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸುಮನ್ ರಂಗನಾಥ್,  ಡಾಲಿ ಧನಂಜಯ್ ,ವೀಣಾ ಸುಂದರ್ ಮತ್ತು ದತ್ತಣ್ಣ ಮುಂತಾದವರ ತಾರಾಬಳಗವಿದೆ, ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.