ಇವರೇ ನೋಡಿ ಸೌದಿ ಅರೇಬಿಯಾದಲ್ಲಿ ಡಿಎಲ್ ಪಡೆದ ಮೊದಲ ಕನ್ನಡತಿ!
Bengaluru:ಕುಂದಾಪುರ: ಮಧ್ಯಪ್ರಾಚ್ಯ ರಾಷ್ಟ್ರವಾದ ಸೌದಿ ಅರೇಬಿಯಾ ಮಹಿಳೆಯರಿಗೆ ವಾಹನ ಚಾಲನಾ ಪರವಾನಗಿ ನೀಡಲು ಅನುಮತಿಸಿದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕದ ಮಹಿಳೆಯೊಬ್ಬರು ಅಧಿಕೃತ ವಾಹನ ಚಾಲನೆ ಪರವಾನಗಿ ಪಡೆದಿದ್ದಾರೆ. ಸರ್ಕಾರ ನಡೆಸಿದ ವಾಹನ ಚಾಲನಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕುಂದಾಪುರ ಮೂಲದ ಮಹಿಳೆ ಡಾ.ವಾಣಿಶ್ರೀ ಸಂತೋಷ್ ಶೆಟ್ಟಿ ಚಾಲನಾ ಪರವಾನಗಿ ಪಡೆದಿದ್ದಾರೆ ಕುಂದಾಪುರ ಆಲ್ಬಾಡಿ ಮೂಲದ ವಾಣಿಶ್ರೀ ಕಳೆದ ಹದಿನೈದು ವರ್ಷಗಳಿಂದ ಸೌದಿ ಅರೇಬಿಯಾ ರಾಜಧಾನಿ ರಿಯಾದ್ ನಲ್ಲಿ ತನ್ನ ಪತಿ ಹಾಗೂ ಮಕ್ಕಳೊಡನೆ ವಾಸವಿದ್ದಾರೆ. ದಂತವೈದ್ಯಳಾಗಿರುವ ವಾಣಿಶ್ರೀ ನವೆಂಬರ್ 21ರಂದು ತಮ್ಮ ವಾಹನ ಚಾಲನಾ ಪರವಾನಗಿ ಪಡೆದಿದ್ದು ಈ ಮೂಲಕ ಸೌದಿಯಲ್ಲಿ ವಾಹನ ಚಾಲನಾ ಪರವಾನಗಿ ಪಡೆದ ಮೊದಲ ಕನ್ನಡತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವಾಹನ ಚಾಲನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ವಾಣಿಶ್ರೀ 2002ರಲ್ಲಿ ಭಾರತೀಯ ವಾಹನ ಚಾಲನಾ ಪರವಾನಗಿ ಪಡೆದಿದ್ದರು.ಆದರೆ ವಿವಾಹದ ಬಳಿಕ ಸೌದಿ ಅರೇಬಿಯಾಗೆ ಸ್ಥಳಾಂತರಗೊಂಡಿದ್ದ ವಾಣಿಶ್ರೀಗೆ ಅಲ್ಲಿನ ಸ್ಥಳೀಯ ಸರ್ಕಾರದ ನಿರ್ಬಂಧದ ಕಾರಣ ವಾಹನ ಚಾಲನೆಗೆ ಅವಕಾಶ ದೊರಕಿರಲಿಲ್ಲ. ಆದರೆ 2017 ಸೆಪ್ಟೆಂಬರ್‌ನಲ್ಲಿ ಸೌದಿ ಸರ್ಕಾರ ಮಹಿಳೆಯರಿಗೆ ವಾಹನ ಚಾಲನೆಗಿದ್ದ ನಿರ್ಬಂಧ ತೆಗೆದು ಹಾಕಿ ಅವರಿಗೆ ಸಘ ಚಾಲನಾ ಪರವಾನಗಿ ನೀಡುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತ್ತು. ಇದರಿಂದ ಮಹಿಳೆಯರು ಸಹ ಅಲ್ಲಿನ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಲು ಅನುಕೂಲವಾಗಿತ್ತು. ಇದರ ಬೆನ್ನಲ್ಲೇ ವಾಣಿಶ್ರೀ ಸಹ ಚಾಲನಾ ಪರವಾನಗಿ ಪಡೆಯಲು ಬಯಸಿದ್ದರು. ಇದೀಗ ಅವರ ಆಸೆ ಕೈಗೂಡಿದೆ. "ಈಗಲೂ ಸಹ ಸೌದಿ ಪ್ರಜೆಗಳು ಮಹಿಳಾ ವಾಹನ ಚಾಲಕಿಯರೆಂದರೆ ಬಿಟ್ಟ ಕಣ್ಣು ಬಿಟ್ಟಂತೆ ಕಾಣುತ್ತಾರೆ. ಕೆಲವೇ ಕೆಲವು ಮಹಿಳೆಯರು ಇಲ್ಲಿನ ರಸ್ತೆಗಳಲ್ಲಿ ಕಾರುಗಳನ್ನು ಓಡಿಸಲು ಮುಂದಾಗಿದ್ದಾರೆ.ಇನ್ನು ಚಾಲನಾ ಪರವಾನಗಿ ಪಡೆಯುವಲ್ಲಿ ಸಹ ಸೌದಿ ಮಹಿಳೆಯರಿಗೆ ಪ್ರಥಮ ಆದ್ಯತೆ ಇದೆ." ವಾಣಿಶ್ರೀ ಹೇಳಿದ್ದಾರೆ. ವಾಣಿಶ್ರೀ ಅವರ ಪತಿ ಸಂತೋಷ್ ಶೆಟ್ಟಿ ಸೌದಿ ಅರೇಬಿಯಾದಲ್ಲಿರುವ ಕರಾವಳಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದಾರೆ. ಅವರು ಕೊಲ್ಲಿ ರಾಷ್ಟ್ರದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡಿಗರನ್ನು ಒಟ್ಟುಗೂಡಿಸುವ ಕಾಯಕ ನಡೆಸಿದ್ದಾರೆ. ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ಸರಮ್ಮ ಥಾಮಸ್ ಸೌದಿ ಅರೇಬಿಯಾದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ಭಾರತೀಯ ಮಹಿಳೆ ಆಗಿದ್ದಾರೆ.