X Close
X

ಇಂದು ವಿಧಾನಮಂಡಲ ಅಧಿವೇಶನ ಆರಂಭ: ಹಿಜಾಬ್ ವಿವಾದ ನಿರ್ವಹಣೆಯಲ್ಲಿ ಸರ್ಕಾರ ವೈಫಲ್ಯ ಎತ್ತಿತೋರಿಸಲು ವಿರೋಧ ಪಕ್ಷಗಳು ಸಜ್ಜು


hijab2

ಬೆಂಗಳೂರು: ಹಿಂಸಾಚಾರಕ್ಕೆ ತಿರುಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಬೇಕಾಗಿ ಬಂದ ಹಿಜಾಬ್ ವಿವಾದ ಕುರಿತು ಸರ್ಕಾರವನ್ನು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. 

ಇಂದಿನಿಂದ 10 ದಿನಗಳ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು ಇಂದು ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೊಟ್ ಭಾಷಣ ಮಾಡಲಿದ್ದಾರೆ. ಹಿಜಾಬ್ ವಿವಾದ ಮಾತ್ರವಲ್ಲದೆ ರಾಜ್ಯ ಸರ್ಕಾರವನ್ನು ಪ್ರತಿಪಕ್ಷಗಳು ಹಲವು ವಿಷಯಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಿದೆ.

ದೆಹಲಿಯಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಅವರ ರಾಜೀನಾಮೆಗೆ ಪಟ್ಟು, ನೈತಿಕ ಪೊಲೀಸ್ ಗಿರಿ ಘಟನೆಗಳು, ಮೇಕೆದಾಟು ಯೋಜನೆ ವಿಳಂಬ, ನದಿಗಳ ಅಂತರ ಜೋಡಣೆ ವಿಷಯ ಮತ್ತು ರೈತರ ವಿಚಾರಗಳ ಕುರಿತು ಸರ್ಕಾರವನ್ನು ತೀವ್ರ ತರಾಟೆಗೆ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ: ಇಂದು ಸಂಜೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪಕ್ಷದ ಕಾರ್ಯತಂತ್ರದ ಕುರಿತು ಕಾಂಗ್ರೆಸ್ ಚರ್ಚೆ ನಡೆಸಲಿದೆ. ಆಡಳಿತಾರೂಢ ಬಿಜೆಪಿಯು ಪ್ರತಿಪಕ್ಷಗಳ ದಾಳಿಯನ್ನು ನಿಭಾಯಿಸಲು ಸಿದ್ಧವಾಗಿದೆ, ಆದರೆ ಸರ್ಕಾರವು ಪರಿಷತ್ತಿನಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಲು ಉತ್ಸುಕವಾಗಿದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು ಮತ್ತು ಕೌನ್ಸಿಲ್‌ನಲ್ಲಿ ಮಂಡಿಸಲಾಯಿತು. ಈಗ ಮೇಲ್ಮನೆಯಲ್ಲಿ ಬಲ ಹೆಚ್ಚಿದ್ದು, ಬಿಜೆಪಿ ಅದನ್ನು ಅಂಗೀಕರಿಸುವ ವಿಶ್ವಾಸದಲ್ಲಿದೆ.

ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪ್ರತಿನಿಧಿ ಜೊತೆಗೆ ಮಾತನಾಡಿ,  ಹಿಜಾಬ್ ವಿವಾದವನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿವಾದವನ್ನು ಆರಂಭದಲ್ಲಿಯೇ ತಗ್ಗಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ನೈತಿಕ ಪೊಲೀಸ್‌ಗಿರಿಯ ಘಟನೆಗಳು ಹೆಚ್ಚುತ್ತಿವೆ. ರಾಷ್ಟ್ರಧ್ವಜದ ಬದಲು ಕೇಸರಿ ಧ್ವಜ ಹಾಕುವ ಮಾತನಾಡಿರುವ ಆರ್‌ಡಿಪಿಆರ್ ಸಚಿವರ ವಿರುದ್ಧ ರಾಜ್ಯಪಾಲರು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಉದ್ಯೋಗಾವಕಾಶ ಸೃಷ್ಟಿ, ಕಲ್ಯಾಣ-ಕರ್ನಾಟಕ ಭಾಗದ ಅಭಿವೃದ್ಧಿ, ನೀರಾವರಿ ಮತ್ತು ರೈತರ ಸಮಸ್ಯೆಗಳ ಬಗ್ಗೆ ಪಕ್ಷವು ಸರ್ಕಾರವನ್ನು ಪ್ರಶ್ನಿಸುತ್ತದೆ ಎಂದು ಅವರು ಹೇಳಿದರು.

ಸದನದಲ್ಲಿ ಹಿಜಾಬ್ ಗದ್ದಲದ ಚರ್ಚೆಯನ್ನು ಸರ್ಕಾರ ವಿರೋಧಿಸುವ ಸಾಧ್ಯತೆಯಿದೆ, ಈ ವಿಷಯವು ಹೈಕೋರ್ಟ್‌ನ ಮುಂದಿದೆ ಎಂದು ಹೇಳುವ ಸಾಧ್ಯತೆಯಿದೆ. ಆದಾಗ್ಯೂ, ನ್ಯಾಯಾಲಯವು ವಿಚಾರಣೆ ನಡೆಸುತ್ತಿರುವ ಹಿಜಾಬ್ ವಿವಾದದ ವಿಷಯಕ್ಕೆ ಹೋಗದೆ, ವಿವಾದ ಮತ್ತು ಕಾನೂನು ಅಥವಾ ಸುವ್ಯವಸ್ಥೆಯ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಪ್ರತಿಪಕ್ಷಗಳಿಗೆ ಉತ್ತರ ನೀಡಲು ಸರ್ಕಾರ ಸಿದ್ಧವಾಗಿದೆ. ಅವರು ಯಾವುದೇ ವಿಷಯವನ್ನು ಕೈಗೆತ್ತಿಕೊಳ್ಳಲಿ, ನಾವು ಪ್ರತಿಕ್ರಿಯಿಸಲು ಸಿದ್ಧರಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್‌ಸಿ ಎನ್ ರವಿಕುಮಾರ್ ಹೇಳಿದ್ದಾರೆ.

(KANNADA PRABHA)