ಬಳ್ಳಾರಿ: ಗಾಲಿ ಜನಾರ್ದನ ರೆಡ್ಡಿ ಮತ್ತು ಸಚಿವ ಬಿ ಶ್ರೀರಾಮುಲು ಆಪ್ತ ಗೆಳೆಯರು. ಇದನ್ನು ಸಾರ್ವಜನಿಕವಾಗಿಯೂ ಒಬ್ಬರಿಗೊಬ್ಬರು ತೋರಿಸಿಕೊಂಡಿದ್ದಾರೆ. ಇದೀಗ ಮತ್ತೆ ತಮ್ಮ ಗೆಳೆಯನನ್ನು ಮನಸಾರೆ ಹೊಗಳಿದ್ದಾರೆ ಶ್ರೀರಾಮುಲು.
ನಿನ್ನೆ ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ನಡೆದ ಆರ್ಯವೈದ್ಯ ಅಸೋಸಿಯೇಷನ್ ಸನ್ಮಾನ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದರು. ಅದರಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ರಾಜ್ಯದಲ್ಲಿ 2008 ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಜನಾರ್ದನ ರೆಡ್ಡಿ ಅವರು ಏನು ಹೇಳುತ್ತಿದ್ದರು ಅದು ಆಗುತ್ತಿತ್ತು. ಹಾಗಾಗಿ ಅವರು ಅಂದುಕೊಂಡಿದ್ದೆಲ್ಲ ಮಾಡಲು ಆಯ್ತು. ಆದರೆ ಇಂದಿನ ಸರ್ಕಾರದಲ್ಲಿ ಶ್ರೀರಾಮುಲು ಗಟ್ಟಿಗೆ ಮಾತನಾಡಿದರೆ ಏನಾಗುತ್ತೋ ಗೊತ್ತಿಲ್ಲ. ಅದಕ್ಕಾಗಿ ಜನಾರ್ಧನರೆಡ್ಡಿಯವರು ಮಾಡಿದಷ್ಟು ಅಭಿವೃದ್ಧಿ ನನಗೆ ಮಾಡಲು ಆಗಲ್ಲ ಎಂದು ಅಸಹಾಯಕತೆಯನ್ನು ತೋಡಿಕೊಂಡರು.
ಜನಾರ್ಧನರೆಡ್ಡಿ ಮತ್ತು ನಾನು ಇಬ್ಬರೂ ಸೇರಿ ಕೆಲಸ ಮಾಡುವ ಅವಕಾಶ ದೊರೆತಿದೆ. ನಗರದ ಅಭಿವೃದ್ದಿ ಮಾಡುವುದು ನಮ್ಮ ಮುಖ್ಯ ಗುರಿ ಎಂದರು.
(KANNADA PRABHA)