X Close
X

ಅವಹೇಳನಕಾರಿ ಹೇಳಿಕೆ, ವಸುಂಧರಾ ರಾಜೆಗೆ ಪತ್ರ ಬರೆದು ಕ್ಷಮೆ ಕೋರುವುದಾಗಿ ಶರದ್ ಯಾದವ್ ಹೇಳಿಕೆ


Sharadyadav
Bengaluru:ಪಾಟ್ನಾ: ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಜೆಡಿಯು ಮಾಜಿ ನಾಯಕ  ಶರದ್ ಯಾದವ್  ಕ್ಷಮೆ ಕೋರುವುದಾಗಿ  ಹೇಳಿದ್ದಾರೆ.

ಶರದ್ ಯಾದವ್ ಅವಹೇಳನಕಾರಿ ಹೇಳಿಕೆ ವಿರುದ್ಧ ಚುನಾವಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು  ವಸಂಧರಾ ರಾಜೆ ಒತ್ತಾಯಿಸಿದ್ದರು.

ರಾಜೆ ಅವರ ಹೇಳಿಕೆಯನ್ನು ಗಮನಿಸಿದ್ದೇನೆ.  ತಮ್ಮಿಬ್ಬರ ನಡುವಿನ ಸಂಬಂಧ ತೀರಾ ಹಳೆಯದಾಗಿದ್ದು, ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಯಾದವ್ ಸುದ್ದಿಗಾರರಿಗೆ ಹೇಳಿದ್ದಾರೆ. ಈ ಸಂಬಂಧ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.

ಮಾಜಿ ರಾಜ್ಯಸಭಾ ಸದಸ್ಯರಾಗಿರುವ ಶರದ್ ಯಾದವ್, ರಾಜಸ್ತಾನದಲ್ಲಿ ಎಲ್ ಜೆಡಿ ಪರ ಚುನಾವಣಾ ಪ್ರಚಾರದ ವೇಳೆಯಲ್ಲಿ  ವಸಂಧರಾ ರಾಜೆ  ಸ್ಥೂಲಕಾಯದ  ಬಗ್ಗೆ ಮಾತನಾಡಿದರಲ್ಲದೇ, ಅವರನ್ನು ವಿಶ್ರಾಂತಿಗೆ ಕಳುಹಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದ ನಂತರ ಇದೊಂದು ಹಾಸ್ಯ, ವಸುಂಧರಾ ರಾಜೆ ಅವರನ್ನು ನೋವಿಸುವ ಉದ್ದೇಶವಿರಲಿಲ್ಲ ಎಂದು ಹೇಳಿದ್ದರು.

ಆದರೆ, ಯಾದವ್ ಹೇಳಿಕೆಯಿಂದ ತಮ್ಮಗೆ ನೋವಾಗಿದೆ. ಇದು ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ.  ಹಿರಿಯ ನಾಯಕರಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಈ ರೀತಿಯ ಜನರು ಮುಂದೆ ಹೇಳಿಕೆ ನೀಡದಂತೆ ತಡೆಗಟ್ಟಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ  ಶರದ್ ಯಾದವ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕೆಂದು  ಒತ್ತಾಯಿಸಿದ್ದರು.

ಶರದ್ ಯಾದವ್ ನೀಡಿರುವ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ವ್ಯಕ್ತವಾಗಿದ್ದವು.