X Close
X

ಸಚಿವರು ಕೊವಿಡ್-19 ಆಸ್ಪತ್ರೆಗಳಿಗೆ ಭೇಟಿ ನೀಡಿ, ವೈದ್ಯರು, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಬೇಕು: ಡಿಕೆಶಿ


shivakumar
Bengaluru:

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಇತರೆ ಮುಖಂಡರ ಜೊತೆಗೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಪೂರ್ವನಿಗದಿಯಂತೆ ಕೋವಿಡ್ ಸೋಂಕಿತರ ಕುಶಲೋಪಚರಿ ವಿಚಾರಿಸಲು ಮುಂದಾಗಿದ್ದರು. ಆದರೆ ಅವರಿಗೆ ವಿಕ್ಟೋರಿಯಾ ಭೇಟಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ ಆಸ್ಪತ್ರೆಯ ಹೊರ ಆವರಣದಲ್ಲಿ ಆಸ್ಪತ್ರೆಯ ವೈದ್ಯಕಿಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಸೋಂಕಿತರ ಬಗ್ಗೆ ಹಾಗೂ ಆಸ್ಪತ್ರೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಕೆಲಕಾಲ ಚರ್ಚಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ಅಧಿಕಾರಿಗಳು, ದಾದಿಯರು ಹಾಗೂ ಪೊಲೀಸರ ಸೇವಾಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದರು.

ವಿಕ್ಟೋರಿಯಾ ಆಸ್ಪತ್ರೆ ಎದುರಿಗಿನ ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ವಿಕ್ಟೋರಿಯಾ ಆಸ್ಪತ್ರೆ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕ ಸಾಧಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು, ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್ ಗಳು ಹಾಗೂ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ ವಿಕ್ಟೋರಿಯಾ ರೋಗಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಸೋಂಕಿತರಿಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿ ಶೀಘ್ರಗುಣಮುಖರಾಗಲೆಂದು ಶಿವಕುಮಾರ್ ಹಾರೈಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, 4 ದಿನದ ಮಗುವಿನಿಂದ ಹಿಡಿದು 90 ವರ್ಷದ ವಯೋವೃದ್ಧರೂ‌, ಬಾಣಂತಿಯರು ಸಹ ವಿಕ್ಟೋರಿಯಾದಲ್ಲಿ ಗುಣಮುಖರಾಗಿ ಹೋದ ಉದಾಹರಣೆಯಿದೆ. ಈ ಆಸ್ಪತ್ರೆಯಿಂದ ಗುಣಮುಖರಾಗಿ ಹೋದವರಲ್ಲಿ ಅನೇಕರು ಇತರೆ ರೋಗಿಗಳಿಗೆ ಸಹಾಯ ಮಾಡಲು ಮುಂದಾಗಿರುವ ಬಗ್ಗೆ ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ ಎಂದರು.

ಕೊರೋನಾದಿಂದ ನಾವು‌ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರೊಂದಿಗೆ ಬದುಕಬೇಕಿದೆ. ಸೋಂಕಿತರಿಗೆ ಆತ್ಮವಿಶ್ವಾಸ ಮನೋಧೈರ್ಯ ತುಂಬಿದರೆ ಅರ್ಧಕ್ಕರ್ಧ ರೋಗವೇ ವಾಸಿಯಾದಂತಾಗುತ್ತದೆ ಎಂದರು.

ವಿಕ್ಟೋರಿಯಾಕ್ಕೆ ತಾವು ತಪ್ಪುಕಂಡುಹಿಡಿಯಲೋ ಅಥವಾ ಆರೋಪ ಮಾಡಲೆಂದೋ ಭೇಟಿಕೊಟ್ಟಿಲ್ಲ. ತಪ್ಪನ್ನೇ ಕಂಡುಹಿಡಿಯಬೇಕೆಂದರೆ‌ ನಮಲ್ಲೂ ನಿಮ್ಮಲ್ಲೂ ಎಲ್ಲರಲ್ಲಿಯೂ ತಪ್ಪುಕಂಡುಹಿಡಿಯಬಹುದು. ತಪ್ಪುಕಂಡು ಹಿಡಿಯಲು ಬೇರೆಬೇರೆ ವಿಚಾರಗಳಿವೆ. ವಿಧಾನಸೌಧದ ಹೊರಗೂ ಒಳಗೂ ಚರ್ಚಿಸಬಹುದು ಎಂದು ಮಾರ್ಮಿಕವಾಗಿ ನುಡಿದರು.

ಕೊರೋನಾ ಸೋಂಕಿತರ ಸೇವೆ ಮಾಡುವುದು ಅಷ್ಟು ಸುಲಭವಾದ ಕೆಲಸವೂ ಅಲ್ಲ. ಎಲ್ಲರೂ ಮಾನಸಿಕರಾಗಿ ಸಿದ್ಧರಿರಬೇಕು. ವೈದ್ಯಕೀಯ ಸಿಬ್ಬಂದಿಯೂ ಸಹ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಾರೆ. ಅವರು ಸಹ ಮನೋಸ್ಥೈರ್ಯದಿಂದಿರಬೇಕು. ಇದು ಅಷ್ಟು ಸುಲಭದ ಕೆಲಸವೂ ಅಲ್ಲ. ಆರೋಪ‌ ಮಾಡುವುದನ್ನು ಬಿಟ್ಟು ಧೈರ್ಯ ತುಂಬುವ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಧೈರ್ಯತುಂಬಿದರು. ಅಲ್ಲದೆ ಬಿಎಸ್ ವೈ ಸರ್ಕಾರದ ಸಚಿವರುಗಳು ಸಹ ಕೊವಿಡ್-19 ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರು ಹಾಗೂ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಜೊತೆಗಿದ್ದರು.