X Close
X

ಖರ್ಗೆ ಸಮ್ಮಿಶ್ರ ಸರ್ಕಾರದ ಸಿಎಂ ಆಗೋದು ಬೇಡ ಅಂತ ಹೇಳಿದ್ದು ರಾಹುಲ್: ದೇವೇಗೌಡ


hdd
Bengaluru:ಮಂಡ್ಯ: ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಗೆ ಹೇಳಿದ್ದೆ. ಆದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇದಕ್ಕೆ ಒಪ್ಪಲಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಗುರುವಾರ ಹೇಳಿದ್ದಾರೆ.
ಇಂದು ಮಂಡ್ಯದಲ್ಲಿ ಜೆಡಿಎಸ್ ಸಮಾವೇಶದಲ್ಲಿ ತಮ್ಮ ಮೊಮ್ಮಗ ನಿಖಿಲ್ ಕುಮಾರ್ ಸ್ವಾಮಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ ನಂತರ ಮಾತನಾಡಿದ ದೇವೇಗೌಡರು, ನಮ್ಮದು ವಂಶಪಾರಂಪರ್ಯ ರಾಜಕಾರಣ ಅಲ್ಲ. ಕುಟುಂಬ ರಾಜಕಾರಣ ಎಂದು ಹೀಯಾಳಿಸುತ್ತಿರುವುದಕ್ಕೆ ತುಂಬಾ ನೋವಾಗುತ್ತಿದೆ ಎಂದರು.
ಈ ಬಾರಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಹುದ್ದೆಯನ್ನು ಕುಮಾರಸ್ವಾಮಿ ಒಪ್ಪಿರಲಿಲ್ಲ. ಕೊನೆಗೆ ನಾನು ಖರ್ಗೆ ಹೆಸರನ್ನು ಸೂಚಿಸಿದೆ. ಆದರೆ ಸೋನಿಯಾ, ರಾಹುಲ್ ಗಾಂಧಿ, ಜೆಡಿಎಸ್ 37 ಸ್ಥಾನ ಪಡೆದಿದ್ದರೂ ಕೂಡಾ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದರು ಎಂದರು.
ರಾಜಕೀಯದಲ್ಲಿ ಯಾರು, ಯಾರನ್ನೂ ಮುಗಿಸೋಕೆ ಸಾಧ್ಯವಿಲ್ಲ. ನಾನು ನಿನ್ನೆ ಒಬ್ಬ ಮೊಮ್ಮಗನಿಗೆ ಕಣ್ಣೀರು ಹಾಕಿದ್ದೇನೆ ಅಂತ ವ್ಯಂಗ್ಯವಾಡಬೇಡಿ. ನನಗೆ 60 ವರ್ಷಗಳ ರಾಜಕೀಯ ಜೀವನದಲ್ಲಿ ಮೂಡಲಹಿಪ್ಪೆಯ ಜನ ನನ್ನ ಅಷ್ಟೊಂದು ಪ್ರೀತಿ ತೋರಿಸಿದ್ದರು. ಅವರ ಅಭಿಮಾನಕ್ಕೆ ನಾನು ಕಣ್ಣೀರು ಹಾಕಿದ್ದೆ ಎಂದು ದೇವೇಗೌಡರು ಸಮಜಾಯಿಷಿ ನೀಡಿದರು.
ನಿಖಿಲ್​ ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರು. ಆಗ ತಂದೆ ಆರೋಗ್ಯಕ್ಕಾಗಿ ಮರುಗಿದರು. ನಾನು ನಿಮ್ಮ ಪರ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಆತ ಹೇಳಿದ. ತಂದೆ ಜೊತೆ ಕಷ್ಟಕಾಲದಲ್ಲಿ ನಿಂತು ನಿಖಿಲ್ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ನಮ್ಮದು ವಂಶಪಾರಂಪರ್ಯ ರಾಜಕಾರಣ ಅಲ್ಲ. ನಿಮ್ಮ ಪ್ರೀತಿ ದುರ್ಬಳಕೆ ಮಾಡಿಕೊಳ್ಳಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.