X Close
X

ಪಾಕ್, ಚೀನಾಗೆ ಭಾರಿ ಹಿನ್ನಡೆ: ತಿಂಗಳಲ್ಲೇ ಇರಾನ್ ಚಾಬಹರ್ ಬಂದರು ನಿಯಂತ್ರಣ ಭಾರತಕ್ಕೆ!


chabahar-port
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಭಾರಿ ಹಿನ್ನಡೆಯಾಗಿದ್ದು, ಪಾಕ್, ಚೀನಾ ವಿರೋಧದ ನಡುವೆಯೇ ಇರಾನ್ ತನ್ನ ಚಾಬಹರ್ ಬಂದರು ನಿಯಂತ್ರಣವನ್ನು ಭಾರತಕ್ಕೆ ಹಸ್ತಾಂತರ ಮಾಡಲಿದೆ.

ಈ ಹಿಂದೆ ಭಾರತ ಮತ್ತು ಇರಾನ್ ಮಾಡಿಕೊಂಡಿದ್ದ ಚಾಬಹರ್ ಒಪ್ಪಂದದ ಅನ್ವಯ ಇನ್ನೊಂದು ತಿಂಗಳಲ್ಲಿ ಚಾಬಹರ್ ಬಂದರು ನಿಯಂತ್ರಣ ಭಾರತದ ಪಾಲಾಗಲಿದೆ. ಈ ಬಗ್ಗೆ ಭಾರತಕ್ಕೆ ಆಗಮಿಸಿರುವ ಇರಾನ್ ನ ಸಚಿವ ಅಬ್ಬಾಸ್ ಅಖೌಂಡಿ ಅವರು ಗುರುವಾರ ಹೇಳಿದ್ದಾರೆ.

ನೀತಿ ಆಯೋಗದ ಆಹ್ವಾನದ ಮೇರೆಗೆ ಮೊಬಿಲಿಟಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಖೌಂಡಿ ಭಾರತಕ್ಕೆ ಆಗಮಿಸಿದ್ದು, ಈ ವೇಳೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿಚರ್ಚೆ ನಡೆಸಿದರು. ಈ ವೇಳೆ ಚಾಬಹರ್ ಬಂದರು ನಿಯಂತ್ರಣವನ್ನು ಭಾರತಕ್ಕೆ ನೀಡಲು ನಾವು ಸಿದ್ಧರಿದ್ದೇವೆ. ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಒಪ್ಪಂದದ ಅನ್ವಯ ನಾವು ಕೂಡ ಭಾರತದ ಒಂದು ಬಂದರನ್ನು ಕಳೆದ ಒಂದೂವರೆ ವರ್ಷದಿಂದ ಬಳಕೆ ಮಾಡಿಕೊಳ್ಳುತ್ತಿದ್ದೆವೆ ಎಂದು ಅಖೌಂಡಿ ತಿಳಿಸಿದರು.

ಭಾರತದ ಪಶ್ಚಿಮ ಕರಾವಳಿಯಿಂದ ಚಾಬಹರ್ ಬಂದರು ನಿಯಂತ್ರಣ ಸುಲಭ ಸಾಧ್ಯ. ಅಲ್ಲದೆ ಈ ಬಂದರಿನ ಮೇಲೆ ನಿಯಂತ್ರಣ ಸಾಧಿಸಿದರೆ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಭಾರತ ದೊಡ್ಡ ಮಟ್ಟದಲ್ಲಿ ತಿರುಗೇಟು ನೀಡಿದಂತಾಗುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಾಬಲ್ಯ ಕೂಡ ಹೆಚ್ಚಿದಂತಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇವಲ ಬಂದರು ಮಾತ್ರವಲ್ಲದೇ ಭಾರತ ಇರಾನ್ ನ ಬ್ಯಾಂಕಿಂಗ್ ವಲಯದಲ್ಲೂ ಭಾರಿ ಪ್ರಮಾಣದ ಹೂಡಿಕೆ ಮಾಡಿದ್ದು, ಇದಕ್ಕೆ ಇರಾನ್ ನ ಸೆಂಟ್ರಲ್ ಬ್ಯಾಂಕ್ ಕೂಡ ಅನುಮೋದನೆ ನೀಡಿದೆ. (KANNADA PRABHA)