X Close
X

ಕೊಡಗು: ಅಂತಾರಾಷ್ಟ್ರೀಯ ಥ್ರೋಬಾಲ್‌ ಆಟಗಾರ್ತಿಯ ನೆರವಿಗೆ ಬಂದ ಸಾಮಾಜಿಕ ಮಾಧ್ಯಮ


tasmaa
ಮಡಿಕೇರಿ: ಇತ್ತೀಚಿಗೆ ಭೀಕರ ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆ ಪೈಕಿ ಅಂತಾರಾಷ್ಟ್ರೀಯ ಥ್ರೋಬಾಲ್‌ ಆಟಗಾರ್ತಿ ತಶ್ಮಾ ಮುತ್ತಪ್ಪ ಅವರು ಒಬ್ಬರಾಗಿದ್ದು, ಅವರ ಕುಟುಂಬ ಈಗ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದೆ. 
 
ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿಯಲ್ಲಿ ವಾಸವಿದ್ದ ತಶ್ಮಾ ಮುತ್ತಪ್ಪ ಭೂಕುಸಿತದಿಂದಾಗಿ ಮನೆ ಹಾಗೂ ತಾವು ಗೆದ್ದ ಎಲ್ಲಾ ಟ್ರೋಫಿಗಳನ್ನು ಕಳೆದುಕೊಂಡಿದ್ದಾರೆ. ಆದರೆ ಎಲ್ಲವನ್ನೂ ಕಳೆದುಕೊಂಡು ಕಂಗಲಾಗಿದ್ದ ತಶ್ಮಾ ಕಥೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಥ್ರೋಬಾಲ್ ಆಟಗಾರ್ತಿಯ ನೆರವಿಗೆ ಹಲವರು ಧಾವಿಸಿದ್ದಾರೆ.
 
ಕಳೆದ ಬುಧವಾರ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಅವರ ಪುತ್ರ ವಿಶ್ವಾಸ್ ಅಚ್ಚಯ್ಯ ತಶ್ಮಾ ಮನೆಗೆ ಭೇಟಿ ನೀಡಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
 
ವಿಶ್ವಾಸ್ ಅಚ್ಚಯ್ಯ ಹಾಗೂ ಅವರ ಸ್ನೇಹಿತರು ಸೇರಿ ಒಂದು ವರ್ಷ ನಮ್ಮ ಮನೆಯ ಬಾಡಿಗೆ ಪಾವತಿಸುವುದಾಗಿ ಹಾಗೂ ಇತರೆ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಶ್ಮಾ ತಿಳಿಸಿದ್ದಾರೆ.
 
ಬಡ ಕುಟುಂಬದಿಂದ ಬಂದ 23 ವರ್ಷದ ತಶ್ಮಾ ಅವರು, ಬಾಲ್ಯದಿಂದಲೂ ಥ್ರೋಬಾಲ್ ಬಗ್ಗೆ ಆಸಕ್ತಿ ಹೊಂದಿದ್ದು, ಶ್ರೀಲಂಕಾ ಹಾಗೂ ಮಲೇಷ್ಯಾ ಸೇರಿದಂತೆ ಹಲವು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.
 
ಎರಡು ತಿಂಗಳ ಹಿಂದಷ್ಟೇ ಅವರ ಕುಟುಂಬಕ್ಕೆ ಬೆನ್ನೆಲುಬಾಗಿದ್ದ ಸಹೋದರ ತೀರಿಹೋಗಿದ್ದರು. ಈಗ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ತಶ್ಮಾ ಕಳೆದ ಒಂದು ವರ್ಷದ ಹಿಂದೆ ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಜಾಗ ಖರೀದಿಸಿ ಮನೆ ಕಟ್ಟಿದ್ದರು. ಆದರೆ ಪ್ರಕೃತಿ ವಿಕೋಪಕ್ಕೆ ಈಗ ಮನೆ ನೆಲಸಮವಾಗಿದೆ. ಕ್ರೀಡೆಯಲ್ಲಿ ತಶ್ಮಾ ಇಲ್ಲಿಯವರೆಗೆ ಪಡೆದಿದ್ದ ಪ್ರಶಸ್ತಿ, ದಾಖಲೆಗಳೆಲ್ಲವೂ ನಾಶವಾಗಿವೆ.
 
ತಶ್ಮಾ ಮುತ್ತಪ್ಪ 2016ರಲ್ಲಿ ಬೆಂಗಳೂರಿನ ಸಿಂಧಿ ಕಾಲೇಜ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿ ಚಿನ್ನದ ಪದಕ ಪಡೆದುಕೊಂಡಿದ್ದರು. ಉಳಿದಂತೆ ಹರಿಯಾಣದಲ್ಲಿ ನಡೆದ ರಾಷ್ಟ್ರ ಮಟ್ಟದ ಪಂದ್ಯ, ಚೆನ್ನೈನಲ್ಲಿ ನಡೆದ ಫೆಡರೇಷನ್‌ ಕಪ್‌, ಧಾರವಾಡ, ಉಡುಪಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ತಶ್ಮಾ ಪಾಲ್ಗೊಂಡು ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.
 
ಮನೆಯಲ್ಲಿ ತುಂಬಾ ಕಷ್ಟಇದ್ದ ಹಿನ್ನೆಲೆಯಲ್ಲಿ ಶಿಕ್ಷಣ ಹಾಗೂ ಕ್ರೀಡೆಯಿಂದ ದೂರ ಸರಿಯುವಂತಾಯಿತು. ಮೆಡಿಕಲ್‌ ಕಾಲೇಜಿನಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುತ್ತಿದ್ದೆ. ಈಗ ನಮ್ಮ ಹೊಸ ಮನೆ ಸಂಪೂರ್ಣ ನಾಶವಾಗಿದೆ. ಆದ್ದರಿಂದ ಮಡಿಕೇರಿಯ ನಿರಾಶ್ರಿತರ ಕೇಂದ್ರದಲ್ಲಿ ತಂಗಿದ್ದೇವೆ. ನನಗೆ ಸರ್ಕಾರದಿಂದ ಶಾಶ್ವತ ಉದ್ಯೋಗ ನೀಡಿದರೆ ಸಾಕು ಎಂದು ತಶ್ಮಾ ಹೇಳಿದ್ದಾರೆ. (KANNADA PRABHA)